ಬೆಳಗಾವಿ(ಚಿಕ್ಕೋಡಿ): ಕೃಷ್ಣಾನದಿಯಲ್ಲಿ ನೀರು ಕಡಿಮೆಯಾಗಿರುವ ಹಿನ್ನೆಲೆ ಆಹಾರ ಅರಸಿ ತೋಟವೊಂದಕ್ಕೆ ನುಗ್ಗಿದ್ದ ಮೊಸಳೆಯನ್ನು ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮಸ್ಥರು ಸೆರೆಹಿಡಿದಿದ್ದಾರೆ.
ಚಿಂಚಲಿ ಪಟ್ಟಣದ ಹೊರವಲಯದ ಗ್ರಾಮಸ್ಥರ ತೋಟದಲ್ಲಿ ಮೊಸಳೆ ಪ್ರತ್ಯಕ್ಷವಾಗಿತ್ತು. ಇದನ್ನು ಕಂಡು ಆತಂಕ್ಕೊಳಗಾದ ತೋಟದ ಮಾಲೀಕ ಸ್ಥಳೀಯರಿಗೆ ವಿಷಯವನ್ನು ತಿಳಿಸಿದ್ದಾರೆ. ಬಳಿಕ ಗ್ರಾಮಸ್ಥರೆಲ್ಲಾ ಜೊತೆಗೂಡಿ 7 ಅಡಿ ಉದ್ದದ ಮೊಸಳೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ:10 ಅಡಿ ಉದ್ದದ ಮತ್ತೊಂದು ಮೊಸಳೆಯನ್ನು ಸೆರೆಹಿಡಿದ ಗ್ರಾಮಸ್ಥರು!
ಕೃಷ್ಣಾ ನದಿ ದಡದಲ್ಲಿರುವ ಗ್ರಾಮಗಳಲ್ಲಿ ಈ ರೀತಿ ಮೊಸಳೆಗಳು ತೋಟ, ಜಮೀನುಗಳಿಗೆ ಆಹಾರ ಅರಸಿ ನುಗ್ಗುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಕೃಷ್ಣಾ ನದಿಯಲ್ಲಿ ನೀರು ಬತ್ತಿ ಹೋಗಿರುವ ಹಿನ್ನೆಲೆ ಆಹಾರಕ್ಕಾಗಿ ಮೊಸಳೆಗಳು ಜನ ವಾಸಿಸುವ ಪ್ರದೇಶಕ್ಕೆ ಬರುತ್ತಿರುವುದು ನದಿ ಪಾತ್ರದ ಜನರ ನಿದ್ದೆಗೆಡಿಸಿದೆ. ಈ ಹಿಂದೆ ಕೂಡ ಕೃಷ್ಣ ನದಿ ತೀರದ ಗ್ರಾಮಗಳಲ್ಲಿ 2 ಮೊಸಳೆಗಳನ್ನು ಗ್ರಾಮಸ್ಥರು ಸೆರೆಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದರು.
ಸದ್ಯ ಸೆರೆಹಿಡಿದಿರುವ ಮೊಸಳೆಯನ್ನು ರಾಯಬಾಗ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.