ಮೈಸೂರು: ಮಳೆಯಿಂದಾಗಿ ಭಾರೀ ಗಾತ್ರದ ಮೊಸಳೆಯೊಂದು ನಗರದ ಹೃದಯ ಭಾಗದ ಕುಪ್ಪಣ್ಣ ಪಾರ್ಕ್ ಗೆ ಬಂದು ಇಂದು ಬೆಳಗ್ಗೆ ಕೆಲಕಾಲ ಆತಂಕ ಸೃಷ್ಟಿಸಿತ್ತು. ಮಾರ್ನಿಂಗ್ ವಾಕ್ ವೇಳೆ ಪಾರ್ಕ್ ನಲ್ಲೇ ಮೊಸಳೆ ಕಾಣಿಸಿದ ಹಿನ್ನೆಲೆಯಲ್ಲಿ ವಾಕ್ ಮಾಡುತ್ತಿದ್ದವರು ಗಾಬರಿಯಾಗಿದ್ದಾರೆ. ಪಾರ್ಕ್ ಕಾವಲುಗಾರ ಮೊಸಳೆಯನ್ನು ಗಮನಿಸಿದ ಹಿನ್ನೆಲೆಯಲ್ಲಿ ಭಾರೀ ಅವಘಡವೊಂದು ತಪ್ಪಿದಂತಾಗಿದೆ.
ನಿನ್ನೆ ರಾತ್ರಿ ಸುರಿದ ಮಳೆಯಿಂದಾಗ ಕುಪ್ಪಣ್ಣ ಪಾರ್ಕ್ ಸಮೀಪದಲ್ಲೇ ಇರುವ ಕಾರಂಜಿಕೆರೆಯಿಂದ ಮೊಸಳೆ ಪಾರ್ಕ್ ಗೆ ಬಂದಿದೆ ಎನ್ನಲಾಗಿದೆ. ಪಾರ್ಕ್ ಸಿಬ್ಬಂದಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆಗಮಿಸಿದ ಸುಮಾರು 10ಕ್ಕೂ ಹೆಚ್ಚು ಸಿಬ್ಬಂದಿ ಮೊಸಳೆಯನ್ನು ಹಿಡಿದಿದ್ದಾರೆ. ಸೆರೆ ಸಿಕ್ಕ ಮೊಸಳೆಯನ್ನು ಅರಣ್ಯ ಭವನಕ್ಕೆ ರವಾನೆ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸೆರೆ ಸಿಕ್ಕ ಮೊಸಳೆಯನ್ನು ಕಾರಂಜಿ ಕೆರೆಗೆ ಬಿಟ್ಟಿದ್ದಾರೆ.