– ಕೋಲ್ಕತ್ತಾ ವೈದ್ಯೆ ಅತ್ಯಾಚಾರ, ಹತ್ಯೆಗೆ ಪ್ರಧಾನಿ ಗರಂ; ಆರೋಪಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ
ಮುಂಬೈ: ಮಹಿಳೆಯರ (Women) ಮೇಲಿನ ಅಪರಾಧವನ್ನು ಕ್ಷಮಿಸಲು ಸಾಧ್ಯವಿಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಎಚ್ಚರಿಕೆ ನೀಡಿದ್ದಾರೆ.
ಕೋಲ್ಕತ್ತಾದ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ-ಕೊಲೆಗೆ (RG Kar hospital horror) ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ವೈದ್ಯರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ, ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಹಾರಾಷ್ಟ್ರದ ಜಲಗಾಂವ್‍ನಲ್ಲಿ `ಲಕ್‍ಪತಿ ದೀದಿ’ ಸಮ್ಮೇಳನದಲ್ಲಿ ಮಾತನಾಡಿ, ಮಹಿಳೆಯರ ರಕ್ಷಣೆ ತುಂಬಾ ಮುಖ್ಯವಾದದ್ದು. ಯಾವುದೇ ರಾಜ್ಯ ಸರ್ಕಾರಗಳು ಮಹಿಳೆಯರ ವಿರುದ್ಧ ನಡೆಯುವ ಅಪರಾಧವನ್ನು ಕ್ಷಮಿಸಬಾರದು. ಅಪರಾಧಿ ಯಾರೇ ಇರಲಿ ರಕ್ಷಿಸುವ ಕೆಲಸ ಮಾಡಬಾರದು. ಮಹಿಳೆಯರ ಮೇಲೆ ಅಪರಾಧ ಎಸಗಿದರೆ ಕಟ್ಟುನಿಟ್ಟಿನ ಕಾನೂನಿನ ಮೂಲಕ ಶಿಕ್ಷೆ ನೀಡಲಾಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಲಕ್‍ಪತಿ ದೀದಿ ಯೋಜನೆಯ ಬಗ್ಗೆ ವಿವರಿಸಿದ ಅವರು, ಮಹಿಳೆಯರು ಸ್ವಂತವಾಗಿ 1 ಲಕ್ಷ ರೂ. ವಾರ್ಷಿಕ ಆದಾಯ ಗಳಿಸಬಹುದು. ಮಹಿಳೆಯರು ಕೃಷಿ ಮತ್ತು ಇನ್ನಿತರ ವ್ಯವಹಾರ ಮಾಡುವುದರ ಮೂಲಕ ತಿಂಗಳಿಗೆ ಸುಮಾರು 10,000 ರೂ. ಆದಾಯ ಮಾಡಬಹುದು ಎಂದು ತಿಳಿಸಿದರು.