ಹೈದರಾಬಾದ್: ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ವರದಕ್ಷಿಣೆಗಾಗಿ (Dowry) ಪತಿಯೇ (Husband) ಥಳಿಸಿ ಕೊಂದ ಘಟನೆ ತೆಲಂಗಾಣದ (Telangana) ವಿಕಾರಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಹತ್ಯೆಯಾದ ಮಹಿಳೆಯನ್ನು ಅನುಷಾ (22) ಎಂದು ಗುರುತಿಸಲಾಗಿದೆ. ಹತ್ಯೆ ಆರೋಪಿಯನ್ನು ಮರಮೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಎಂಟು ತಿಂಗಳ ಹಿಂದಷ್ಟೆ ಇಬ್ಬರು ಮದುವೆಯಾಗಿದ್ದರು. ವರದಕ್ಷಿಣೆಗಾಗಿ ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಅನುಷಾ ಮೇಲೆ ಪರಮೇಶ್ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಂಡ್ಯ | `ನಿಗೂಢ ರಕ್ತ’ ಪ್ರಕರಣದ ರಹಸ್ಯ ಬಯಲು
ಘಟನೆಗೂ 2 ದಿನಗಳ ಮೊದಲು ಜಗಳವಾಡಿಕೊಂಡು ಅನುಷಾ ತವರು ಮನೆಗೆ ತೆರಳಿದ್ದರು. ಆದರೆ ಇನ್ನು ಮುಂದೆ ಯಾವುದೇ ಜಗಳ ನಡೆಯುವುದಿಲ್ಲ ಎಂದು ಕುಟುಂಬಕ್ಕೆ ಭರವಸೆ ನೀಡಿ ಪರಮೇಶ್ ಕುಮಾರ್ ಅವಳನ್ನು ಮರಳಿ ಕರೆದುಕೊಂಡು ಬಂದಿದ್ದ. ಬೈಕ್‌ನಲ್ಲಿ ಕರೆದುಕೊಂಡು ಮನೆಯ ಬಳಿ ಬಂದವನೇ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಹೊಟ್ಟೆಗೆ ಒದ್ದು, ದೊಣ್ಣೆಯಿಂದ ಆರು ಬಾರಿ ತಲೆಗೆ ಹೊಡೆದಿದ್ದಾನೆ. ಈ ವೇಳೆ ಕೆಲವರು ತಡೆಯಲು ಯತ್ನಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಅನುಷಾಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾಳೆಂದು ಘೋಷಿಸಿದ್ದಾರೆ.
ಅನುಷಾಳ ಸಹೋದರ ದೂರು ದಾಖಲಿಸಿ ಆರೋಪಿ ಮತ್ತು ಆತನ ತಾಯಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ. ಇದನ್ನೂ ಓದಿ: ಸಾಗರ | ರೈಲ್ವೇ ಹಳಿಗೆ ಹಾರಿ ಆತ್ಮಹತ್ಯೆ ಯತ್ನ – ರೈಲು ನಿಲ್ಲಿಸಿ ರಕ್ಷಣೆಗೆ ಧಾವಿಸಿದ ಲೋಕೋ ಪೈಲಟ್

