– ಪಿಎಸ್ಐ ಕಾಲಿನ ಮೂಳೆ ಮುರಿತ
ಶಿವಮೊಗ್ಗ: ಕಳೆದ ಶುಕ್ರವಾರಷ್ಟೇ (ಫೆ.6) ಜೈಲಿನಿಂದ ಬಿಡುಗಡೆಯಾಗಿ, ಮತ್ತೆ ಡಕಾಯಿತಿಗೆ ಹೊಂಚು ಹಾಕಿದ್ದ ರೌಡಿಶೀಟರ್ ಕಾಲಿಗೆ ಶನಿವಾರ (ಫೆ.7) ಭದ್ರಾವತಿ (Bhadravathi) ಠಾಣೆ ಪೊಲೀಸರು (Police) ಗುಂಡು ಹೊಡೆದಿದ್ದಾರೆ. ಡಿಚ್ಚಿ ಮುಬಾರಕ್ ಎಂಬಾತನೇ ಗುಂಡೇಟು ತಿಂದ ರೌಡಿಶೀಟರ್.
ಭದ್ರಾವತಿ ತಾಲೂಕು ಗೌರಪುರದ ಬಳಿ ಡಿಚ್ಚಿ ಮುಬಾರಕ್ ಡಕಾಯಿತಿ ನಡೆಸಲು ಹೊಂಚು ಹಾಕಿದ್ದ. ಈ ಸಂದರ್ಭದಲ್ಲಿ ಭದ್ರಾವತಿ ಪೇಪರ್ ಟೌನ್ ಠಾಣೆಯ ಪಿಎಸ್ಐ ಕೃಷ್ಣಕುಮಾರ್ ಮಾನೆ ಎಂಬವರು ತಮ್ಮ ಸಿಬ್ಬಂದಿಯ ಜೀವ ರಕ್ಷಣೆಗಾಗಿ ರೌಡಿಶೀಟರ್ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಮುಬಾರಕ್ಗೆ ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಕೈ ಕೊಟ್ಟ ಪ್ರೇಯಸಿ – ಡೆತ್ ನೋಟ್ ಬರೆದಿಟ್ಟು ಬಾಡಿ ಬಿಲ್ಡರ್ ಆತ್ಮಹತ್ಯೆ
ಘಟನೆ ವಿವರ
ಡಿಚ್ಚಿ ಮುಬಾರಕ್ ಶಿವಮೊಗ್ಗದ (Shivamogga) ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಿದ್ದ ಮರು ದಿನವೇ ತನ್ನ 7-8 ಜನ ಸಂಗಡಿಗರೊಂದಿಗೆ ಸೇರಿ ದರೋಡೆ ಮಾಡಲು ಹೊಂಚು ಹಾಕಿದ್ದ. ಕಾರು ಮತ್ತು ಸ್ಕೂಟಿಯಲ್ಲಿ ಮಾರಕಾಸ್ತ್ರಗಳೊಂದಿಗೆ ಭದ್ರಾವತಿ ತಾಲೂಕು ಶಿವನಿ ಕ್ರಾಸ್ ಗೌರಪುರದ ಬಳಿ ಇರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಬಳಿಕ ಭದ್ರಾವತಿ ಡಿವೈಎಸ್ಪಿ ಅವರು ಸ್ಥಳಕ್ಕೆ ಒಂದು ತಂಡ ರಚನೆ ಮಾಡಿ ಕಳುಹಿಸಿದ್ದರು.
ತಂಡದಲ್ಲಿ ಹೊಸಮನೆ ಪಿಎಸ್ಐ ಸಿದ್ದಪ್ಪ ಎಂ.ಪಿ., ಪೇಪರ್ ಟೌನ್ ಠಾಣೆ ಪಿಎಸ್ಐ ಕೃಷ್ಣಕುಮಾರ್, ನ್ಯೂ ಟೌನ್ ಠಾಣೆ ಪಿಎಸ್ಐ ರಮೇಶ್ ಹಾಗೂ ಸಿಬ್ಬಂದಿಯಾದ ವೆಂಕಟೇಶ್, ಆದರ್ಶ್, ಮಂಜುನಾಥ್, ಚಿನ್ನನಾಯ್ಕ್, ಸುನೀಲ್, ಕಾಂತರಾಜ್, ನಾಗರಾಜ್ ಹಾಗೂ ತೇಜಕುಮಾರ್ ಇದ್ದರು.
ರೌಡಿಶೀಟರ್ ಹಾಗೂ ತಂಡವನ್ನು ಬಂಧಿಸಲು ಹೋದಾಗ ಡಿಚ್ಚಿ ಮುಬಾರಕ್ ಹಾಗೂ ಆತನ ಸಂಗಡಿಗರು ಕಲ್ಲು ಮತ್ತು ಚಾಕುಗಳಿಂದ ಪೊಲೀಸರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ. ಇದರಿಂದ ಹೊಸಮನೆ ಠಾಣೆ ಪಿಎಸ್ಐ ಸಿದ್ದಪ್ಪನವರ ಕಾಲಿನ ಮೂಳೆ ಮುರಿತವಾಗಿದೆ. ಇವರ ಮೇಲೆ ಚಾಕುವಿನಿಂದ ಚುಚ್ಚಿ ಗಾಯಗೊಳಿಸಲಾಗಿದೆ. ಅಲ್ಲದೇ ಕೃಷ್ಣಕುಮಾರ್ ಅವರ ಕೈ ಬೆರಳು ಮುರಿತವಾಗಿದೆ. ಜೊತೆಗೆ, ಆದರ್ಶ್ ಅವರ ಕಾಲಿಗೂ ಗಾಯವಾಗಿದೆ.
ಈ ವೇಳೆ, ಪಿಎಸ್ಐ ಕೃಷ್ಣಕುಮಾರ್ ಅವರು ಡಿಚ್ಚಿ ಮುಬಾರಕ್ಗೆ ಶರಣಾಗುವಂತೆ ಸೂಚಿಸಿದರೂ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಮುಬಾರಕ್ ಪೊಲೀಸರಿಗೆ ಆವಾಜ್ ಹಾಕಿ ತನ್ನ ಬಳಿ ಇದ್ದ ಚಾಕುವಿನಿಂದ ಚುಚ್ಚಲು ಹೋಗಿದ್ದ. ಈ ವೇಳೆ ಕೃಷ್ಣಕುಮಾರ್ ತಮ್ಮ ಆತ್ಮರಕ್ಷಣೆಗೆ ಡಿಚ್ಚಿಯ ಬಲಗಾಲಿಗೆ ಗುಂಡೇಟು ನೀಡಿದ್ದಾರೆ. ಆತನ ಜೊತೆ ಸಹಚರಾದ ಜಹೀರ್, ರೆಹಮತ್, ಪಾಷಾ, ಜುನೈದ್ ಮತ್ತು ಮನುಸಿಂಗ್ ಎಂಬರನ್ನು ವಶಕ್ಕೆ ಪಡೆಯಲಾಗಿದೆ. ಮುಬಾರಕ್ ವಿರುದ್ಧ 15 ಪ್ರಕರಣಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಭದ್ರಾವತಿಯ ತಾಲೂಕು ಆಸ್ಪತ್ರೆಗೆ ಶಿವಮೊಗ್ಗ ಎಸ್ಪಿ ನಿಖಿಲ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ, ಘಟನೆಯಲ್ಲಿ ಪಿಎಸ್ಐ ಸಿದ್ದಪ್ಪ ಅವರ ಕಾಲಿನ ಮೂಳೆ ಮುರಿತವಾಗಿದೆ. ನಮ್ಮ ಸಿಬ್ಬಂದಿ ಆದರ್ಶ ಅವರಿಗೂ ಗಾಯವಾಗಿದೆ. ನಮ್ಮ ತಂಡದವರು ಸದ್ಯ ಆರೋಗ್ಯವಾಗಿದ್ದಾರೆ. ಈ ಘಟನೆಯಲ್ಲಿ ನಮ್ಮ ತಂಡವು ಜೀವದ ಹಂಗು ತೊರೆದು ಕೆಲಸ ಮಾಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಕೊಡಗಿನ ಉದ್ಯಮಿ – ಹೆಂಡತಿ ಮಕ್ಕಳ ಸ್ಥಿತಿ ಗಂಭೀರ

