ಮುಂಬೈ: ಟಿ-20 ಕ್ರಿಕೆಟ್‍ನಲ್ಲಿ 6 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದ ಎಡಗೈ ಸ್ಫೋಟಕ ಆಟಗಾರ ಯುವರಾಜ್ ಸಿಂಗ್ ಎಲ್ಲ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದಾರೆ.
ಇಂಗ್ಲೆಂಡಿನಲ್ಲಿ ವಿಶ್ವಕಪ್ ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ 2011ರ ವಿಶ್ವಕಪ್ ಸರಣಿ ಶ್ರೇಷ್ಠ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದ ಯುವರಾಜ್ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ನಿವೃತ್ತಿ ನಿರ್ಧಾರ ಪ್ರಕಟಿಸಿದರು.
Advertisement
ಈ ಕಾರ್ಯಕ್ರಮದಲ್ಲಿ ಯುವರಾಜ್ ಸಿಂಗ್ ತನಗೆ ಸಿಕ್ಕಿದ ಎಲ್ಲ ಪ್ರಶಸ್ತಿಗಳು, ಟ್ರೋಫಿಗಳು, ಸ್ಮರಣಿಕೆಗಳು, ಬ್ಯಾಟ್ ಮತ್ತು ತಮ್ಮ 12ನೇ ನಂಬರಿನ ಜೆರ್ಸಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದರು.
Advertisement
Advertisement
ಈ ಹಿಂದೆ ಮುಂಬರುವ 2019 ರ ಐಸಿಸಿ ವಿಶ್ವಕಪ್ ಬಳಿಕ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸುವ ಕುರಿತು ನಿರ್ಧಾರ ಕೈಗೊಳ್ಳುವುದಾಗಿ 2011 ವಿಶ್ವ ಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಲ್ ರೌಂಡರ್ ಯುವರಾಜ್ ಸಿಂಗ್ ಹೇಳಿದ್ದರು.
Advertisement
ಖಾಸಗಿ ಮಾಧ್ಯಮವೊಂದಕ್ಕೆ ಈ ಕುರಿತು ಪ್ರತಿಕ್ರಿಯಿಯಿಸಿದ್ದ 37 ವರ್ಷದ ಯುವರಾಜ್ ಸಿಂಗ್, ಸದ್ಯ 2019 ವಿಶ್ವಕಪ್ ವೇಳೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಕಡೆ ಗಮನ ಹರಿಸಿದ್ದು, ಬಳಿಕ ನಿವೃತ್ತಿಯ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇನೆ. ಕಳೆದ ಎರಡು ದಶಕಗಳಿಂದ ತಾನು ಭಾರತದ ತಂಡದ ಪರ ಆಡುತ್ತಿದ್ದೇನೆ. ಆದರೆ ಮುಂದೊಂದು ದಿನ ನನ್ನ ನಿವೃತ್ತಿಯ ಜೀವನ ಎದುರಾಗುತ್ತದೆ ಎಂದು ತಿಳಿಸಿದ್ದರು.
2011 ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಯುವರಾಜ್ ಸಿಂಗ್ ಭರ್ಜರಿ ಪ್ರದರ್ಶನ ನೀಡಿದ್ದರು. ಈ ಟೂರ್ನಿಯಲ್ಲಿ 90.50 ಸರಾಸರಿಯಲ್ಲಿ 362 ರನ್ ಹಾಗೂ 15 ವಿಕೆಟ್ ಪಡೆದು ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಯನ್ನು ಪಡೆದಿದ್ದರು. ಅಲ್ಲದೇ ಇಂಗ್ಲೆಂಡ್ ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಿದ್ದ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು.
2000 ರಲ್ಲಿ ಕೀನ್ಯಾ ವಿರುದ್ಧ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವಿ ಇದುವರೆಗೂ 304 ಏಕದಿನ ಪಂದ್ಯಗಳಲ್ಲಿ 8,701 ರನ್ ಸಿಡಿಸಿದ್ದಾರೆ. 2017 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೊನೆ ಬಾರಿಗೆ ಏಕದಿನ ಪಂದ್ಯವನ್ನಾಡಿದ್ದಾರೆ. 2003 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದು, 40 ಪಂದ್ಯಗಳಲ್ಲಿ 1,900 ರನ್ ಗಳಿಸಿದ್ದಾರೆ. 2007 ರಲ್ಲಿ ಮೊದಲ ಟಿ20 ಕ್ರಿಕೆಟ್ ಪಂದ್ಯವನ್ನು ಸ್ಕಾಟ್ ಲ್ಯಾಂಡ್ ವಿರುದ್ಧ ಆಡಿದ್ದು, ಇದುವರೆಗೂ 58 ಪಂದ್ಯಗಳಿಂದ 1,177 ರನ್ ಸಿಡಿಸಿದ್ದಾರೆ. ಉಳಿದಂತೆ ಲೆಗ್ ಸ್ಪಿನ್ ಬೌಲರ್ ಆಗಿ ಟೆಸ್ಟ್, ಏಕದಿನ, ಟಿ20 ಮಾದರಿಯಲ್ಲಿ ಕ್ರಮವಾಗಿ 9, 111, 28 ವಿಕೆಟ್ ಪಡೆದಿದ್ದಾರೆ.
ಕ್ರಿಕೆಟ್ ವೃತ್ತಿ ಜೀವನದ ಆರಂಭ 6, 7 ವರ್ಷಗಳ ಕಾಲ ಉತ್ತಮವಾಗಿ ಆಡಿದ್ದೇನೆ. ನಂತರ ಅವಧಿಯಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರಿಂದ ನನಗೆ ಅವಕಾಶಗಳು ಕಡಿಮೆಯಾದವು. ಅದೇ ಸಂದರ್ಭದಲ್ಲಿ ಕ್ಯಾನ್ಸರ್ ನನ್ನನ್ನು ಕಾಡಿತು. ಆದರೆ ಕ್ಯಾನ್ಸರ್ ನಿಂದ ಗುಣಮುಖನಾದೆ. ಬಳಿಕ ತಂಡದಲ್ಲಿ ನನಗೆ ನಿರಂತರವಾಗಿ ಅವಕಾಶ ಸಿಗಲಿಲ್ಲ. ಕೆಲವು ಪಂದ್ಯಗಳಲ್ಲಿ ಮಾತ್ರ ಆಡಲು ಸಾಧ್ಯವಾಯಿತು ಎಂದು ಈ ಹಿಂದೆ ಯುವಿ ತಿಳಿಸಿದ್ದರು.
2011ರ ವಿಶ್ವಕಪ್ ವರೆಗೂ ಟೀಂ ಇಂಡಿಯಾ ತಂಡದಲ್ಲಿ ನಿರಂತರವಾಗಿ ಆಡಿದ್ದ ಯುವಿ ಆನಂತರ ಕ್ಯಾನ್ಸರ್ ನಿಂದ ಬಳಲಿದ್ದರು. ಆದರೆ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಗೆದ್ದು ಬಂದ ಅವರು ಬಳಿಕ ಫಾರ್ಮ್ ಸಮಸ್ಯೆಯಿಂದ ಬಳಲಿದ್ದರು.
ಯುರಾಜ್ ಸಿಂಗ್‍ಗೆ ಅವರಿಗೆ ಈ ಬಾರಿ ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ಜೀವದಾನ ನೀಡಿತ್ತು. ಯುವಿ ಮೂಲ ಬೆಲೆ 1 ಕೋಟಿ ರೂ. ಗೆ ಖರೀದಿ ಮಾಡಿತ್ತು. ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಯುವರಾಜ್ ರನ್ನು ಖರೀದಿ ಮಾಡಲು ಫ್ರಾಂಚೈಸಿಗಳು ಹಿಂದೇಟು ಹಾಕಿದ್ದರು. ಮೊದಲ ಸುತ್ತಿನಲ್ಲಿ ಯುವಿರನ್ನು ಖರೀದಿ ಮಾಡಲು ಯಾವ ತಂಡಗಳು ಮುಂದೆ ಬರಲಿಲ್ಲ. ಬಳಿಕ 2ನೇ ಸುತ್ತಿನಲ್ಲಿ ಮುಂಬೈ ಖರೀದಿ ಮಾಡಿತು.
ತಮ್ಮ ವೃತ್ತಿ ಜೀವನದ ಅತ್ಯುನ್ನತ್ತ ಶಿಖರದಲ್ಲಿರುವಾಗ ಯುವಿ 2014 ರಲ್ಲಿ ಬರೋಬ್ಬರಿ 16 ಕೋಟಿ ರೂ. ಹಾಗೂ 2015ರಲ್ಲಿ 16 ಕೋಟಿ ರೂ. ಗಳಿಗೆ ಹರಾಜುಗೊಳ್ಳುವ ಮೂಲಕ ದುಬಾರಿ ಆಟಗಾರನೆಂಬ ದಾಖಲೆ ಬರೆದಿದ್ದರು. ಆದರೆ ಆ ಬಳಿಕ 2017, 2018, 2019 ರಲ್ಲಿ ಕ್ರಮವಾಗಿ 7, 2, 1 ಕೋಟಿ ರೂ.ಗೆ ಹರಾಜು ಆಗಿದ್ದರು.ಕಳೆದ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದರು. ಆದರೆ ಟೂರ್ನಿಯಲ್ಲಿ 8 ಇನ್ನಿಂಗ್ಸ್ ಗಳಿಂದ ಕೇವಲ 65 ರನ್ ಮಾತ್ರ ಗಳಿಸಿ ನಿರಾಸೆ ಮೂಡಿಸಿದ್ದರು.
#YuvrajSingh's trophies, jerseys on display at the Mumbai event where he is addressing a press conference #Yuvi pic.twitter.com/YfJl6zhcja
— Suyash Srivastava (@Syu4u) June 10, 2019