ಬೈರ್‌ ಸ್ಟೋವ್ ಶತಕ- ಕೊಹ್ಲಿ ಪಡೆಗೆ 338 ರನ್ ಸವಾಲು ನೀಡಿದ ಅತಿಥೇಯರು

Public TV
2 Min Read
Team India A

ಬರ್ಮಿಂಗ್ ಹ್ಯಾಮ್: ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ತೋರಿದ್ದು, ಭಾರತಕ್ಕೆ 338 ರನ್‍ಗಳ ಗುರಿ ನೀಡಿದೆ. ಬೈರ್‌ಸ್ಟೋವ್ ಶತಕ ಹಾಗೂ ಜೇಸನ್ ರಾಯ್ (66 ರನ್) ಅರ್ಧ ಶತಕ ಸಹಾಯದಿಂದ ಇಂಗ್ಲೆಂಡ್ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿದೆ.

160 ರನ್ ಜೊತೆಯಾಟ:
ಇಂಗ್ಲೆಂಡ್‍ನ ಆರಂಭಿಕ ಬ್ಯಾಟ್ಸಮನ್‍ಗಳಾದ ಜೇಸನ್ ರಾಯ್ ಹಾಗೂ ಬೈರ್‌ಸ್ಟೋವ್ ಎಚ್ಚರಿಕೆಯ ಆಟವಾಡುವ ಮೂಲಕ ಉತ್ತಮ ಆರಂಭ ನೀಡಿದರು. ಇಂಗ್ಲೆಂಡ್ ಇನ್ನಿಂಗ್ಸ್ ನ 21ನೇ ಓವರ್ ಅಂತ್ಯಕ್ಕೆ ಈ ಜೋಡಿ 160 ರನ್ ಗಳಿಸಿತ್ತು. ಆದರೆ 22ನೇ ಓವರ್ ನ ಮೊದಲ ಎಸೆತದಲ್ಲಿಯೇ ರಾಯ್ ವಿಕೆಟ್ ಒಪ್ಪಿಸಿದರು. 57 ಎಸೆತಗಳನ್ನು ಎದುರಿಸಿದ ರಾಯ್ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸುವ ಮೂಲಕ 66 ರನ್ ಗಳಿಸಿದರು.

ಬೈರ್‌ಸ್ಟೋವ್ ಶತಕ:
ರಾಯ್ ಜೊತೆಗೆ ಸಾಥ್ ನೀಡುತ್ತ 56 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ್ದ ಬೈರ್‌ಸ್ಟೋವ್, ಮುಂದಿನ 33 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ವಿಶ್ವಕಪ್‍ನಲ್ಲಿ ಮೊದಲ ಶತಕದ ಖಾತೆಯನ್ನು ಬೈರ್‌ಸ್ಟೋವ್ ತೆರೆದಿದ್ದಾರೆ. ಆದರೆ ಶತಕದ ಬಳಿಕ ಮೊಹಮ್ಮದ್ ಶಮಿ ಬೈರ್‌ಸ್ಟೋವ್ ವಿಕೆಟ್ ಪಡೆದರು. 109 ಎಸೆತಗಳನ್ನು ಎದುರಿಸಿದ ಬೈರ್‌ಸ್ಟೋವ್ 10 ಬೌಂಡರಿ, 6 ಸಿಕ್ಸರ್ ಗಳಿಂದ 111 ರನ್ ಗಳಿಸಿದರು. ಉಳಿದಂತೆ ಬೆನ್ ಸ್ಟೋಕ್ಸ್ 54 ಎಸೆತಗಳಲ್ಲಿ 79 ರನ್ ಸಿಡಿಸಿ ತಂಡದ 300 ರನ್ ಗಡಿದಾಟಲು ಕಾರಣರಾದರು.

ಶಮಿಗೆ 5 ವಿಕೆಟ್:
ಟೀಂ ಇಂಡಿಯಾ ಬೌಲರ್ ಗಳನ್ನು ಕಾಡಿದ್ದ ಬೈರ್‍ಸ್ಟೋವ್ ಹಾಗೂ ನಾಯಕ ಇಯಾನ್ ಮಾರ್ಗನ್ (1 ರನ್) ವಿಕೆಟ್ ಕೀಳುವ ಮೂಲಕ ಮೊಹಮ್ಮದ್ ಶಮಿ ಮಿಂಚಿದ್ದಾರೆ. ಅಲ್ಲದೇ ಇನ್ನಿಂಗ್ಸ್ ನ 44 ಓವರ್ ನ ಮೊದಲ ಎಸೆತದಲ್ಲಿ 44 ರನ್ ಗಳಿಸಿದ್ದ ಜೋ ರೂಟ್ ವಿಕೆಟ್ ಪಡೆದರು. ಅಂತಿಮ ಅಂತದಲ್ಲಿ ಬಲ್ಟರ್ (20 ರನ್) ಹಾಗೂ ವೋಕ್ಸ್ (7 ರನ್) ವಿಕೆಟ್ ಪಡೆದು ಇಂಗ್ಲೆಂಡ್ ರನ್ ವೇಗಕ್ಕೆ ಕಡಿವಾಣ ಹಾಕಿದರು. 10 ಓವರ್ ಬೌಲ್ ಮಾಡಿದ ಶಮಿ 5 ವಿಕೆಟ್ ಪಡೆದು 69 ರನ್ ಬಿಟ್ಟುಕೊಟ್ಟರು.

ದುಬಾರಿಯಾದ ಚಾಹಲ್, ಕುಲ್ದೀಪ್:
ಏಕದಿನ ಪಂದ್ಯದಲ್ಲಿ ಇದೇ ಮೊದಲ ಬಾರಿ ಯಜುವೇಂದ್ರ ಚಾಹಲ್ 88 ರನ್ ನೀಡಿದ್ದಾರೆ. ಇಂಗ್ಲೆಂಡ್ ಬ್ಯಾಟ್ಸಮನ್‍ಗಳನ್ನು ಕಟ್ಟಿ ಹಾಕುವಲ್ಲಿ ವಿಫಲವಾದ ಚಾಹಲ್ 10 ಓವರ್ ಗಳಲ್ಲಿ 7 ಬೌಂಡರಿ, 6 ಸಿಕ್ಸರ್ ಮೂಲಕ 8.80 ಎಕೆನಾಮಿಯಲ್ಲಿ 88 ರನ್ ನೀಡಿದ್ದಾರೆ. ಇತ್ತ ಕುಲ್ದೀಪ್ ಯಾದವ್ ಕೂಡ ತಮ್ಮ ಸ್ಪೇಲ್‍ನಲ್ಲಿ 72 ರನ್ ನೀಡಿ ದುಬಾರಿಯಾದರು. ಉಳಿದಂತೆ ಹಾರ್ದಿಕ್ ಪಾಂಡ್ಯ 60 ರನ್ ನೀಡಿದರೆ, ವೇಗಿ ಬುಮ್ರಾ ಒಂದು ವಿಕೆಟ್ ಪಡೆದು 44 ರನ್ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *