ಹುಬ್ಬಳ್ಳಿ: ರಣಜಿ ಟ್ರೋಫಿಯಲ್ಲಿ (Ranji Trophy) ತವರಿನಲ್ಲಿ ಕರ್ನಾಟಕ (Karnataka) ತಂಡಕ್ಕೆ ಜಯ ಸಿಕ್ಕಿದ್ದು, ಚಂಡೀಗಢ (Chandigarh) ವಿರುದ್ಧ ಇನ್ನಿಂಗ್ಸ್ ಹಾಗೂ ಭರ್ಜರಿ ಅಂತರದಲ್ಲಿ ಗೆಲುವನ್ನು ಮುಡಿಗೇರಿಸಿಕೊಂಡಿದೆ.
ಹುಬ್ಬಳ್ಳಿ ರಾಜ್ ನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಎಲೀಟ್ ಬಿ ಗುಂಪಿನ 5ನೇ ಲೀಗ್ ಪಂದ್ಯದಲ್ಲಿ, ಎದುರಾಳಿ ತಂಡವನ್ನು ಇನ್ನಿಂಗ್ಸ್ ಹಾಗೂ 185 ರನ್‌ಗಳ ಅಂತರದಿಂದ ಸೋಲಿಸಿ 7 ಅಂಕಗಳನ್ನು ಗಳಿಸಿದೆ. ಪಂದ್ಯದ 3ನೇ ದಿನವಾದ ಮಂಗಳವಾರ ಒಟ್ಟು 16 ವಿಕೆಟ್‌ಗಳು ಪತನವಾದವು, ಸ್ಪಿನ್ನರ್‌ಗಳಾದ ಶ್ರೇಯಸ್ ಗೋಪಾಲ ಹಾಗೂ ಶಿಖರ ಶೆಟ್ಟಿ 15 ವಿಕೆಟ್‌ಗಳನ್ನು ಪಡೆಯುವ ಮೂಲಕ ಜಯದ ದಡ ಮುಟ್ಟಿಸಿದರು.

ಕರ್ನಾಟಕ ಪ್ರಥಮ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ಗೆ ಸ್ಮರಣ್ ಭರ್ಜರಿ ದ್ವಿಶತಕದ ಮೂಲಕ 547 ರನ್ ಗಳಿಸಿ ಡಿಕ್ಲರ್ ಮಾಡಿಕೊಂಡಿತ್ತು. ಚಂಡೀಗಢ ಪ್ರಥಮ ಇನ್ನಿಂಗ್ಸ್‌ನಲ್ಲಿ 222 ರನ್ ಹಾಗೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ 140 ಗಳಿಸಿ ಸುಲಭ ತುತ್ತಾಯಿತು.
325 ರನ್‌ಗಳ ಹಿನ್ನೆಡೆಯೊಂದಿಗೆ ಫಾಲೋ ಆನ್ ಪಡೆದ ಚಂಡೀಗಢ ಎರಡನೇ ಇನಿಂಗ್ಸ್‌ನಲ್ಲೂ ಕೇವಲ 140 ರನ್‌ಗಳಿಗೆ ಸರ್ವಪತನ ಕಂಡಿತು. ಎರಡನೇ ಇನಿಂಗ್ಸ್‌ನಲ್ಲಿ ಚಂಡೀಗಢ ಪರ (43) ರನ್ ಗಳಿಸಿದ ಆರಂಭಿಕ ಬ್ಯಾಟರ್ ಶಿವಂ ಭಾಂಬ್ರಿ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಂಡರು.
ಕರ್ನಾಟಕದ ಪರ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ಶಿಖರ್ ಶೆಟ್ಟಿ (12.5-2-61-5) ಹಾಗೂ ಶ್ರೇಯಸ್ ಗೋಪಾಲ್ (13-1-45-3) ವಿಕೆಟ್ ಪಡೆದು ಕರ್ನಾಟಕ ತಂಡ ಇನಿಂಗ್ಸ್ ಹಾಗೂ 185 ರನ್‌ಗಳ ಸುಲಭ ಗೆಲುವಿಗೆ ಕಾರಣರಾದರು.

