ವಡೋದರ: ಇಲ್ಲಿ ನಡೆಯುತ್ತಿರುವ ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ ಆತಿಥೇಯ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 301 ರನ್‌ಗಳ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು ಭರ್ಜರಿ ಆರಂಭ ಪಡೆಯಿವಲ್ಲಿ ಯಶಸ್ವಿಯಾಯಿತು. ಮೊದಲ ವಿಕೆಟ್‌ಗೆ ಹೆನ್ರಿ ನಿಕೋಲ್ಸ್ ಹಾಗೂ ಡೆವೊನ್ ಕಾನ್‌ವೇ 117 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭಕೊಟ್ಟರು. ನಿಕೋಲ್ಸ್ ಹಾಗೂ ಕಾನ್‌ವೇ ಮೊದಲ 20 ಓವರ್‌ಗಳಲ್ಲಿ ಯಶಸ್ವಿಯಾಗಿ ಎದುರಿಸಿದರು. ಈ ವೇಳೆ ದಾಳಿಗಿಳಿದ ಹರ್ಷಿತ್ ರಾಣಾ, ಕಿವೀಸ್ ಆರಂಭಿರಿಬ್ಬರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಮೊದಲಿಗೆ 62 ರನ್ ಗಳಿಸಿದ್ದ ನಿಕೋಲ್ಸ್ ವಿಕೆಟ್ ಪಡೆದ ರಾಣಾ, ಇದಾದ ನಂತರ 56 ರನ್ ಗಳಿಸಿದ್ದ ಕಾನ್‌ವೇಯನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಹರ್ಷಿತ್ ರಾಣಾ ಯಶಸ್ವಿಯಾದರು.
ವಿಲ್ ಯಂಗ್(12) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಮೊಹಮ್ಮದ್ ಸಿರಾಜ್ ಅವಕಾಶ ನೀಡಲಿಲ್ಲ. ಇನ್ನು ಗ್ಲೆನ್ ಫಿಲಿಫ್ಸ್ ಬ್ಯಾಟಿಂಗ್ ಕೂಡಾ ಕೇವಲ 12 ರನ್‌ಗಳಿಗೆ ಸೀಮಿತವಾಯಿತು. ಫಿಲಿಫ್ಸ್ ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಡೇರಲ್ ಮಿಚೆಲ್, ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಒಂದು ಹಂತದಲ್ಲಿ 198 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ನ್ಯೂಜಿಲೆಂಡ್ ತಂಡಕ್ಕೆ ಮಿಚೆಲ್ ಆಸರೆಯಾದರು. ಆಕರ್ಷಕ ಬ್ಯಾಟಿಂಗ್ ನಡೆಸಿದ ಮಿಚೆಲ್ 71 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 84 ರನ್ ಬಾರಿಸಿ ಪ್ರಸಿದ್ದ್ ಕೃಷ್ಣ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಆಗಿ ಪೆವಿಲಿಯನ್‌ಗೆ ಮರಳಿದರು.
ಇನ್ನು ಟೀಂ ಇಂಡಿಯಾ ಪರ ಸಂಘಟಿತ ದಾಳಿ ನಡೆಸಿದ ಪ್ರಸಿದ್ದ್ ಕೃಷ್ಣ, ಹರ್ಷಿತ್ ರಾಣಾ ಹಾಗೂ ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ ಒಂದು ವಿಕೆಟ್ ಉರುಳಿಸಿದರು.


