ಹುಬ್ಬಳ್ಳಿ: ರಾಜನಗರದ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಡಿವಿಷನ್ ಕ್ರಿಕೆಟ್ ಟೂರ್ನಿಯ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಇಬ್ಬರು ಆಟಗಾರರು ಡಿಕ್ಕಿ ಹೊಡೆದುಕೊಂಡಿದ್ದಾರೆ. ಈ ಪರಿಣಾಮ ಆಟಗಾರನೊಬ್ಬನಿಗೆ ಗಂಭೀರವಾಗಿ ಗಾಯಗೊಂಡಿದ್ದು, ಐಸಿಯುಗೆ ದಾಖಲಾಗಿದ್ದಾನೆ.
ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ಎ ಹಾಗೂ ಧಾರವಾಡದ ಎಸ್‍ಡಿಎಂ ಬಿ ತಂಡಗಳ ನಡುವೆ ಪಂದ್ಯದ ನಡೆದ ವೇಳೆ ಈ ಘಟನೆ ಸಂಭಸಿವಿದೆ. 19 ನೇ ಓವರ್‍ನಲ್ಲಿ ಫೀಲ್ಡಿಂಗ್ ಮಾಡುವಾಗ ಕವರ್ಸ್ ಹಾಗೂ ಪಾಯಿಂಟ್ ಕ್ಷೇತ್ರದ ನಡುವೆ ಎಸ್‍ಡಿಎಂ ಬಿ ತಂಡದ ಪ್ರಜ್ವಲ್ ಶಿರೋಳ ಮತ್ತು ಪ್ರಜ್ವಲ್ ಬೋರಣ್ಣ ಡಿಕ್ಕಿಯಾಗಿ, ಪ್ರಜ್ವಲ್ ಶಿರೋಳ ಪ್ರಜ್ಞಾಹೀನನಾಗಿ ಮೈದಾನದಲ್ಲಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಕ್ಲಬ್‍ನ ಸದಸ್ಯರು, ಪಂದ್ಯ ನೋಡುತ್ತಿದ್ದವರು ಮತ್ತು ಕೆಎಸ್‍ಸಿಎ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಬೃಂದಾವನದಲ್ಲಿ ಅನುಮತಿ ಇಲ್ಲದೇ ರಾತ್ರಿ ಶೂಟಿಂಗ್ – ಯುಟ್ಯೂಬ್ ಅಡ್ಮಿನ್ ಅರೆಸ್ಟ್
ಕೆಲ ಸಮಯದಲ್ಲಿಯೇ ಸ್ಕ್ಯಾನಿಂಗ್ ಮಾಡಿದಾಗ ಮೆದುಳಿಗೆ ಬಲವಾಗಿ ಪೆಟ್ಟು ಬಿದ್ದಿರುವುದು ದೃಢಪಟ್ಟಿದ್ದು, ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಹೇಳಿದರು. ಅದರಂತೆ ಆತನಿಗೆ ಚಿಕಿತ್ಸೆ ಕೊಡಿಸಲಾಗಿದೆ.
ಈ ಕುರಿತು ಮಾತನಾಡಿದ ಕೆಎಸ್‍ಸಿಎ ಧಾರವಾಡ ವಲಯದ ಚೇರ್ಮನ್ ವೀರಣ್ಣ ಸವಡಿ, ಪ್ರಜ್ವಲ್ ಶಿರೋಳ ಪ್ರಜ್ಞಾಹೀನನಾಗಿದ್ದರಿಂದ ತುರ್ತಾಗಿ ಚಿಕಿತ್ಸೆ ಮಾಡಲೇಬೇಕು ಎಂದು ವೈದ್ಯರು ಹೇಳಿದ್ದರು. ಪೋಷಕರಿಗೆ ವಿಷಯ ತಿಳಿಸಿ ಒಂದೂವರೆ ಗಂಟೆಗಳ ಕಾಲ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದು, ಪ್ರಸ್ತುತ ಪ್ರಜ್ವಲ್ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ ಎಂದರು.
ಚಿಕಿತ್ಸೆ ಖರ್ಚು ಭರಿಸಲಿರುವ ಕೆಎಸ್‍ಸಿಎ!:
ಗಾಯಗೊಂಡಿರುವ ಪ್ರಜ್ವಲ್ ಶಿರೋಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‍ಸಿಎ) ಭರಿಸಲಿದೆ. ಶನಿವಾರ ಸಂಜೆ ಪ್ರಜ್ವಲ್ ಶಿರೋಳಗೆ ಪ್ರಜ್ಞೆ ಬಂದಿದೆ. ಮಂಗಳವಾರದ ತನಕ ಐಸಿಯುನಲ್ಲಿಯೇ ಇರಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಆತನ ಪೋಷಕರು ಚಿಂತಿಸಬೇಕಿಲ್ಲ. ನಮ್ಮ ಸಂಸ್ಥೆ ಆಟಗಾರನ ಪರ ಇರಲಿದೆ. ಆತನ ಸಂಪೂರ್ಣ ಖರ್ಚು ನೋಡಿಕೊಳ್ಳಲಿದೆ ಎಂದು ಕೆಎಸ್‍ಸಿಎ ಧಾರವಾಡ ವಲಯದ ನಿಮಂತ್ರಕ ಅವಿನಾಶ ಪೋತದಾರ ತಿಳಿಸಿದರು. ಇದನ್ನೂ ಓದಿ: ಇಂದಿನಿಂದ ಶಬರಿಮಲೆ ಯಾತ್ರೆ ಆರಂಭ – 2 ಡೋಸ್ ಲಸಿಕೆ ಕಡ್ಡಾಯ