ಹುಬ್ಬಳ್ಳಿ: ವೈದ್ಯರ ಹೇಳಿಕೆಯಂತೆ ಸತ್ತಿದೆ ಎಂದು ಅಂತ್ಯಕ್ರಿಯೆ ಮಾಡಲು ಸಿದ್ಧತೆ ನಡೆಸಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಮಗು ಬದುಕುಳಿದ ಅಚ್ಚರಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ ನಗರದ ನಿವಾಸಿ ಈರಪ್ಪ ಬಸವ ಎಂಬವರ ಒಂದು ವರ್ಷದ ಮಗು ಅಂತ್ಯಕ್ರಿಯೆ ವೇಳೆ ಬದುಕಿ ಬಂದ ಪುಟ್ಟ ಕಂದಮ್ಮ. ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯ ವೈದ್ಯರು ಮಗು ಸಾವನ್ನಪ್ಪಿದೆ ಎಂದು ಹೇಳಿ ದೃಢಪಡಿಸಿದ್ದರು. ಆದರೆ ಅಂತ್ಯಕ್ರಿಯೆ ವೇಳೆ ಮಗು ಉಸಿರಾಡಿ ಬದುಕಿದೆ.
ನಡೆದಿದ್ದು ಏನು?
ಈರಪ್ಪ ಬಸವ ಅವರ ಒಂದು ವರ್ಷದ ಮಗ ಆಕಾಶ್ ಕಳೆದ ಎರಡು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ. ಈ ವೇಳೆ ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆ ದಾಖಲಿಸಿದ್ದರು. ಆದರೆ ಇಂದು ಬೆಳಿಗ್ಗೆ ವೈದ್ಯ ಎಲ್ ಎಸ್ ಕುಲಕರ್ಣಿ ಎಂಬವರು ಮಗು ಸಾವನ್ನಪ್ಪಿದೆ ಎಂದು ಹೇಳಿ ಮೃತದೇಹ ತೆಗೆದುಕೊಂಡು ಹೋಗುವಂತೆ ಹೇಳಿದ್ದರು. ವೈದ್ಯರ ಮಾತಿನಿಂದ ಅಘಾತಕ್ಕೆ ಒಳಗಾದ ಮಗುವಿನ ಕುಟುಂಬಸ್ಥರು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. ಆದರೆ ಈ ವೇಳೆ ಮಗು ಇದ್ದಕ್ಕಿದ್ದ ಹಾಗೇ ಉಸಿರಾಡಿದ್ದು, 2 ಬಾರಿ ವಾಂತಿ ಕೂಡ ಮಾಡಿಕೊಂಡಿದೆ. ಕೂಡಲೇ ಎಚ್ಚೆತ್ತ ಪೋಷಕರು ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಕಿಮ್ಸ್ ಆಸ್ಪತ್ರೆಯ ಮಕ್ಕಳ ಘಟಕದ ಐಸಿಯು ಘಟಕದಲ್ಲಿ ಮಗು ಚಿಕಿತ್ಸೆ ಪಡೆಯುತ್ತಿದೆ. ಆದರೆ ಕಿಮ್ಸ್ ಆಸ್ಪತ್ರೆಯ ವೈದ್ಯರು ಮಗುವನ್ನು ಬೇಗ ದಾಖಲಿಸಿದ್ದಾರೆ ಉತ್ತಮವಾಗಿತ್ತು, ಸದ್ಯ ಮಗುವಿನ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದು, ಚಿಕಿತ್ಸೆ ಮುಂದುವರಿಸಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೇ ಇಂತಹ ಘಟನೆಗಳು ನಡೆಯುವುದು ಅಪರೂಪ ಎಂದು ತಿಳಿಸಿದ್ದಾರೆ. ಇತ್ತ ಮಗು ಬದುಕಿದ್ದರೂ ಸಾವನ್ನಪ್ಪಿದ ಎಂದು ಹೇಳಿದ ಖಾಸಗಿ ವೈದ್ಯರ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv