ಮಂಗಳೂರು: ಆಸ್ಪತ್ರೆಯೊಂದರಲ್ಲಿ ಸ್ಟ್ರೆಚ್ಚರ್ ತನ್ನಷ್ಟಕ್ಕೆ ತಾನೇ ಆಚೆ ಈಚೆ ಚಲಿಸುವ ವೀಡಿಯೋ ಮಂಗಳೂರಿನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ದೃಶ್ಯ ಎಂದೇ ಬಿಂಬಿಸಲಾಗಿದೆ.
ಈ ವಿಡಿಯೋ ಕೆಲವು ದಿನಗಳಿಂದ ಮಂಗಳೂರು ಜನರ ಫೇಸ್‍ಬುಕ್ ಮತ್ತು ವಾಟ್ಸಪ್‍ಗಳಲ್ಲಿ ಹರಿದಾಡುತ್ತಿದೆ. ಭೂತ- ಪ್ರೇತಗಳ ಬಗ್ಗೆ ನಂಬಿಕೆ ಹೊಂದಿರುವ ಕರಾವಳಿಯಲ್ಲಿ ಈ ವಿಡಿಯೋ ಬಗ್ಗೆ ನಾನಾ ರೀತಿಯ ಮಾತುಗಳು ಕೇಳಿಬರುತ್ತಿದೆ.
Advertisement
ಆದರೆ ಈ ವಿಡಿಯೋ ಎರಡು ವಾರಗಳ ಹಿಂದೆಯೇ ವೈರಲ್ ಆಗಿತ್ತು. ಮಾರ್ಚ್‍ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಆಗಿದ್ದ ಈ ವೀಡಿಯೋ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ವೀಡಿಯೋ ಅರ್ಜೆಂಟಿನಾದ ಸಾಂತಾ ಫೇ ಯಲ್ಲಿನ ರೊಸಾರಿಯೋ ನಗರದಲ್ಲಿರುವ ಆಸ್ಪತ್ರೆಯೊಂದರ ದೃಶ್ಯಾವಳಿ ಎಂದು ಕೆಲ ಆಂಗ್ಲ ಮಾಧ್ಯಮಗಳು ವರದಿ ಮಾಡಿದ್ದವು.
Advertisement
ಈ ವೀಡಿಯೋವನ್ನ ಗಮನಿಸಿದ್ರೆ ಗಾಳಿಯಿಂದ ಸ್ಟ್ರೆಚ್ಚರ್ ಚಲಿಸಿರಲು ಸಾಧ್ಯವಿಲ್ಲ ಎಂಬುದು ಗೊತ್ತಾಗುತ್ತದೆ. ಯಾಕಂದ್ರೆ ಅಲ್ಲಿರುವ ಮರಗಿಡಗಳು ಗಾಳಿಗೆ ಅತ್ತಿತ್ತ ವಾಲಾಡುವುದು ಕಾಣುವುದಿಲ್ಲ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಸ್ಟ್ರೆಚ್ಚರ್ ತನ್ನಷ್ಟಕ್ಕೇ ಚಲಿಸುವುದನ್ನು ನೋಡಿ ಕೆಲವರು ದೆವ್ವ ಭೂತ ಎಂದು ಮಾತಾಡಿಕೊಂಡರೆ ಇನ್ನೂ ಕೆಲವರು ಇದು ಯಾರೋ ತಮಾಷೆಗಾಗಿ ಬೇಕಂತಲೇ ಮಾಡಿದ್ದಾರೆಂದು ಅಭಿಪ್ರಾಯ ಪಟ್ಟಿದ್ದರು. ಕೊನೆಗೆ ಇಲ್ಲಿನ ಆರೋಗ್ಯ ಇಲಾಖೆಯವರು ಈ ಎಲ್ಲಾ ವಾದಗಳಿಗೆ ತೆರೆಎಳೆದು, ಆಸ್ಪತ್ರೆಯ ಇಬ್ಬರು ನೌಕರರು ತೆಳುವಾದ ಅರೆಪಾರದರ್ಶಕ ದಾರವನ್ನ ಬಳಸಿ ಈ ರೀತಿ ಮಾಡಿದ್ದಾರೆ ಎಂದು ತಿಳಿಸಿದ್ದಾಗಿ ಮಿರರ್ ಪತ್ರಿಕೆ ಎರಡು ವಾರಗಳ ಹಿಂದೆಯೇ ವರದಿ ಮಾಡಿತ್ತು.