– ಬೆಳೆದೆ ಬೆಳೆಯುತ್ತೇನೆ ಎಂಬ ಛಲ ಇರಲಿ
2024 ಹೋಗಿ 2025 ಬಂದಿದೆ. ಹೊಸ ವರ್ಷದ (New Year) ಆರಂಭದಲ್ಲಿ ಹಲವು ಮಂದಿ ಈ ವರ್ಷ ನಾನು ಈ ಕೆಲಸವನ್ನು ಪೂರ್ಣಗೊಳಿಸಬೇಕು ಎಂದು ಸಂಕಲ್ಪ ಕೈಗೊಳ್ಳುತ್ತಾರೆ. ನಾನಾ ರೀತಿಯ ರೆಸಲ್ಯೂಷನ್ ಹಾಕಿಕೊಳ್ಳುತ್ತಾರೆ. ಈ ವರ್ಷ ಕನಸಿನ ಯೋಜನೆಯನ್ನು (Dream Project) ಪೂರ್ಣಗೊಳಿಸುತ್ತೇನೆ, ಮತ್ತೊಂದು ಉದ್ಯಮವನ್ನ ಆರಂಭಿಸುತ್ತೇನೆ, ವೃತ್ತಿಗೆ ಬೇಕಾಗಿರುವ ಕೌಶಲ್ಯವನ್ನು ಆನ್‌ಲೈನ್‌ನಲ್ಲಿ ಕಲಿಯುತ್ತೇನೆ, ಹೊಸ ಸ್ಥಳಕ್ಕೆ ಭೇಟಿ ನೀಡುತ್ತೇನೆ. ವಾರದಲ್ಲಿ ಒಂದು ಪುಸ್ತಕವಾದರೂ ಓದುತ್ತೇನೆ. ಹೀಗೆ ಮಾಡಬೇಕಾದ ಹಲವು ಪಟ್ಟಿಗಳನ್ನು ಮಾಡುತ್ತಾರೆ.
Advertisement
ಈ ರೀತಿ ಪಟ್ಟಿ ಮಾಡಿದವರ ಪೈಕಿ ಹಲವು ಮಂದಿಯ ಬಾಯಿಯಲ್ಲಿ ಜನವರಿ ಮೊದಲ ವಾರ ಮಾತ್ರ ಈ ಮಾಡಬೇಕಾದ ಕೆಲಸಗಳ ಪಟ್ಟಿ ಓಡಾಡುತ್ತಿರುತ್ತದೆ. ಎರಡನೇ ವಾರದಿಂದ, ದಿನಗಳು ಮುಂದೂಡಿಕೆ ಆಗುತ್ತಲೇ ಇರುತ್ತದೆ. ದಿನಗಳು ಮುಂದೂಡಿ ಮುಂದೂಡಿ ಕೊನೆಗೆ ವರ್ಷವೇ ಪೂರ್ಣಗೊಳ್ಳುತ್ತದೆ. ಮತ್ತೆ ಪುನ: ಮುಂದಿನ ವರ್ಷ ಈ ಸಂಕಲ್ಪಗಳ ಬಗ್ಗೆ ಮಾತು ಬರುತ್ತದೆ. ಈ ರೀತಿ ಸಂಕಲ್ಪಗಳನ್ನು ಮಾಡಿ ಯಾವುದೇ ಪ್ರಯೋಜನ ಇಲ್ಲ. ಈ ಕಾರಣಕ್ಕೆ ಈ ಬಾರಿ ಹಲವು ರೆಸಲ್ಯೂಷನ್ ಕೈಗೊಳ್ಳದೇ ಒಂದೋ ಎರಡು ಮಾಡಲು ಪ್ರಯತ್ನಿಸಿ. ಎಲ್ಲವನ್ನೂ ಒಟ್ಟಿಗೆ ಆರಂಭಿಸಿದರೆ ಅದು ವಿಫಲವಾಗುತ್ತದೆ. ಆದರ ಬದಲು ಒಂದೊಂದನ್ನೇ ಆರಂಭಿಸುತ್ತಾ ಹೋದರೆ ಆ ರೆಸಲ್ಯೂಷನ್ ಪೂರ್ಣಗೊಳಿಸುವುದು ಸುಲಭ.
Advertisement
ಒಂದೊಂದು ಸಂಕಲ್ಪಗಳು ಪೂರ್ಣಗೊಂಡರೆ ಒಂದು ಸಣ್ಣ ಯುದ್ಧ ಗೆದ್ದಂತೆ. ಸಣ್ಣ ಸಣ್ಣ ಯುದ್ಧ ಗೆದ್ದ ಬಳಿಕವಷ್ಟೇ ರಾಜನಾದವನು ಮಹಾರಾಜನಾಗುತ್ತಾನೆ. ಈ ಸಾಧನೆ ಪೂರ್ಣಗೊಳ್ಳುವ ಸಂದರ್ಭದಲ್ಲಿ ಅನುಮಾನ, ಅವಮಾನವಾಗುವುದು ಸಹಜ. ಯಾರೇ ದೊಡ್ಡ ವ್ಯಕ್ತಿಯ ಆತ್ಮಚರಿತ್ರೆ ಓದಿದರೆ ಅದರಲ್ಲಿ ತನಾಗದ ಅವಮಾನ, ಅನುಮಾನದ ಬಗ್ಗೆ ಒಂದು ಅಧ್ಯಾಯ ಇರುತ್ತದೆ. ಈ ಕಾರಣಕ್ಕೆ ನಮ್ಮ ಸಾಧನೆ ಹೇಗಿರಬೇಕು ಅಂದರೆ ನಮ್ಮ ಯೋಗ್ಯತೆ ಬಗ್ಗೆ ಅನುಮಾನ ಪಟ್ಟವರೆಲ್ಲಾ ನಮ್ಮನ್ನು ಮಾತನಾಡಿಸುವ ಮೊದಲು ಅವರ ಯೋಗ್ಯತೆ ಬಗ್ಗೆ ಯೋಚಿಸುವಂತಿರಬೇಕಂತೆ. ಈ ರೀತಿ ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮ ಅಗತ್ಯ.
Advertisement
ಕಠಿಣ ಪರಿಶ್ರಮದ ಜೊತೆ ನಾವು ಆಡುವ ಮಾತಿನ ಮೇಲೆ ಹಿಡಿತ ಇರಬೇಕು. ಕೇವಲ ಮಾತುಗಳು ಆಡಲು ಬಂದರೆ ಸಾಲದು. ಯಾರ ಜೊತೆ ಹೇಗೆ ಮಾತನಾಡಬೇಕೆಂಬ ಅರಿವಿರಬೇಕು. ಈ ಕಾರಣಕ್ಕೆ ನಾಲಿಗೆಗೆ ಜಗತ್ತಿನಲ್ಲಿ ವಿಷ ಮತ್ತು ಅಮೃತ ಇರುವ ಏಕೈಕ ಜಾಗ ಎಂಬ ಹೆಸರು ಬಂದಿದೆ. ಮಾತೇ ಬಂಡವಾಳ ಹೌದು. ಆದರೆ ಸ್ನೇಹಿತರು ಸರಿ ಇಲ್ಲದೇ ಇದ್ದರೆ ಸಂಗ್ರಹಗೊಂಡ ಬಂಡವಾಳ ಕ್ಷಣ ಮಾತ್ರದಲ್ಲಿ ಖಾಲಿಯಾದಿತು.
Advertisement
ಕೊನೆಯದಾಗಿ ಜೀವನದಲ್ಲಿ ನಾವು ಭೂಮಿಯ ಮೇಲಿರುವ ಹುಲ್ಲಿನಂತೆ ಬೆಳೆಯಬೇಕು. ಯಾರು ಎಷ್ಟೇ ಹೀಯಾಳಿಸಿದರೂ ನಮ್ಮ ಆಸೆ ಕನಸುಗಳನ್ನು ಕತ್ತರಿಸಿದರೂ ಸಹ ಮತ್ತೆ ಬೆಳೆದೆ ಬೆಳೆಯುತ್ತೇನೆ ಎನ್ನುವ ಛಲ ಹೊಂದಿರಬೇಕು. ಈ ಛಲ ಎಲ್ಲರಿಗೂ ಬರಲಿ. ಹೊಸ ವರ್ಷ ಎಲ್ಲರಿಗೂ ಹರ್ಷ ತರಲಿ. 2025ರಲ್ಲಿ ಕನಸುಗಳು ನನಸಾಗಲಿ.