ಜಿ9 ಕಮ್ಯೂನಿಕೇಷನ್ ಮೀಡಿಯ ಅಂಡ್ ಎಂಟರ್ ಟೈನ್ಮೆಂಟ್ ಮುಂದಿನ ಚಿತ್ರದ ಕುರಿತು ಮಾಹಿತಿ ನೀಡಿದ್ದು, ಈ ಚಿತ್ರದಲ್ಲಿ ಕ್ರೇಜಿ ಸ್ಟಾರ್ (Crazystar) ರವಿಚಂದ್ರನ್ (Ravichandran) ಅವರು ನಾಯಕರಾಗಿ ನಟಿಸುತ್ತಿದಾರೆ. ಈಗಾಗಲೇ ಆಕ್ಸಿಡೆಂಟ್, ಲಾಸ್ಟ್ ಬಸ್, ಅಮೃತ್ ಅಪಾರ್ಟ್ ಮೆಂಟ್ಸ್ ಅಂತಹ ಅಪಾರ ಮೆಚ್ಚುಗೆ ಪಡೆದ ಚಿತ್ರಗಳನ್ನು ನಿರ್ಮಿಸಿರುವ ಸಂಸ್ಥೆಯು ಲೀಗಲ್-ಥ್ರಿಲ್ಲರ್ ಶೈಲಿಯ ಗುರುರಾಜ ಕುಲಕರ್ಣಿ (Gururaj) (ನಾಡಗೌಡ) ಅವರ ನಿರ್ದೇಶನದ ಈ ಚಿತ್ರವನ್ನು ನಿರ್ಮಿಸಲು ಸಜ್ಜಾಗಿದೆ.
ತಮ್ಮ ಚೊಚ್ಚಲ ನಿರ್ದೇಶನದ, ಕೌಟುಂಬಿಕ-ಥ್ರಿಲ್ಲರ್ ಶೈಲಿಯ ‘ಅಮೃತ್ ಅಪಾರ್ಟ್ ಮೆಂಟ್ಸ್’ ಚಿತ್ರಕ್ಕೆ ಸ್ವತಃ ತಾವೇ ಕಥೆ-ಚಿತ್ರಕಥೆಯನ್ನು ಬರೆದು ಪ್ರಶಂಸೆ ಗಳಿಸಿದ ಗುರುರಾಜ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಚಿತ್ರ ಮಾಡಲು ಉತ್ಸುಕರಾಗಿದ್ದಾರೆ. ಅವರು ನೀಡಿದ ಕಥಾಹಂದರವನ್ನು ರವಿಚಂದ್ರನ್ ಮೆಚ್ಚಿ ಒಪ್ಪಿಗೆ ನೀಡಿದ ಹಿನ್ನಲೆಯಲ್ಲಿಯೇ ಈ ಚಿತ್ರದ ತಯಾರಿಕೆ ನಡೆದಿದೆ. ಇದನ್ನೂ ಓದಿ: ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ
ತಮಗಿರುವ ಕೌಟುಂಬಿಕ ಪ್ರೇಕ್ಷಕ ವರ್ಗದ ಜೊತೆಗೆ, ಜಾಗತಿಕ ಮಟ್ಟದಲ್ಲಿನ ಹಲವಾರು ಭಾಷೆಗಳ, ವಿವಿಧ ಬಗೆಯ ಕಥೆಗಳನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿರುವ ಇಂದಿನ ಯುವ ಪೀಳಿಗೆಯೊಂದಿಗೂ, ಈ ಚಿತ್ರದ ಮೂಲಕ ತಾವು ಹತ್ತಿರವಾಗುವ ಅವಕಾಶವಿದೆ ಎಂಬುದು ರವಿಚಂದ್ರನ್ ಅಭಿಪ್ರಾಯ. ರವಿಚಂದ್ರನ್ ಈ ಚಿತ್ರದ ಪ್ರಮುಖ ಪಾತ್ರವನ್ನು ವಿಶಿಷ್ಟವಾಗಿ, ಒಂದು ಹೊಸ ಆಯಾಮದಲ್ಲಿ ನಟಿಸುವ ಸದಾವಕಾಶವನ್ನು ತಾವು ಗುರುತಿಸಿರುವುದಾಗಿ ಭರವಸೆ ನೀಡಿದ್ದಾರೆ. ಕನ್ನಡ ಚಿತ್ರಗಳ ಬಗ್ಗೆ ಎಲ್ಲೆಡೆ ಬೇಡಿಕೆ ಹಾಗೂ ಆಸಕ್ತಿ ಇರುವ ಈ ಸಮಯದಲ್ಲಿ, ತಮ್ಮ ಈ ಹೊಸ ಚಿತ್ರವು ನಮ್ಮ ಚಿತ್ರರಂಗಕ್ಕೆ ಇನ್ನಷ್ಟು ಮೆರುಗನ್ನು ತರಲಿದೆ ಎಂಬ ವಿಶ್ವಾಸವನ್ನು ಕನ್ನಡದ ಶೋ ಮ್ಯಾನ್ ಎಂದೇ ಖ್ಯಾತಿ ಪಡೆದ ಕ್ರೇಜಿ ಸ್ಟಾರ್ ವ್ಯಕ್ತಪಡಿಸಿದ್ದಾರೆ.
ಸ್ವತಃ ಗುರುರಾಜ್ ಅವರದೇ ಕಥೆ ಈ ಚಿತ್ರಕ್ಕೂ ಇದ್ದು, ಚಿತ್ರದ ತಾರಾಗಣ ಹಾಗೂ ದೊಡ್ಡ ಕ್ಯಾನ್ವಾಸನ್ನು ನಿಭಾಯಿಸಲು ಒಗ್ಗೂಡಿಸಿದ ಸಶಕ್ತ ತಾಂತ್ರಿಕ ತಂಡದಲ್ಲಿ ಸಂಗೀತ ನಿರ್ದೇಶಕರಾಗಿ ಅನೂಪ್ ಸೀಳಿನ್, ಛಾಯಾಗ್ರಾಹಕರಾಗಿ ಶಿವ ಬಿಕೆ ಕುಮಾರ್, ಸಂಕಲನಕಾರರಾಗಿ ಬಿ.ಎಸ್.ಕೆಂಪರಾಜು, ಭಾಷಣೆಕಾರರಾಗಿ ಎಂ.ಎಸ್.ರಮೇಶ್ ಸೇರ್ಪಡೆಗೊಂಡಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿತ್ರದ ಶೀರ್ಷಿಕೆ ಮತ್ತಿತರ ವಿವರಗಳು ಶೀಘ್ರದಲ್ಲೇ ಪ್ರಕಟಿಸುವುದಾಗಿ ಚಿತ್ರ ಸಂಸ್ಥೆಯು ತಿಳಿಸಿದೆ.