ಕಲಬುರಗಿ: ಸಿಮೆಂಟ್ ಫ್ಯಾಕ್ಟರಿಯಲ್ಲಿ ಆರ್ಚ್ ಹಾಗೂ ಕ್ರೇನ್ ಬಿದ್ದು 6 ಕಾರ್ಮಿಕರ ದುರ್ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಅಧಿಕಾರಿಗಳನ್ನು ಸೇಡಂ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 2ರಂದು ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿರುವ ಸಿಮೆಂಟ್ ಕಾರ್ಖಾನೆಯಲ್ಲಿ ದುರ್ಘಟನೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಡೌನ್‍ನ ಆರ್ಚ್ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದ ಪ್ರೋಜೆಕ್ಟ್ ಮ್ಯಾನೇಜರ್, ಸೇಫ್ಟಿ ಆಫೀಸರ್ ಸೇರಿದಂತೆ ಐದು ಆರೋಪಿಗಳನ್ನು ಇನ್ಸ್ಪೆಕ್ಟರ್ ಪಿ.ವಿ.ಸಾಲಿಮಠ್ ಭಾನುವಾರ ಬಂಧಿಸಿದ್ದಾರೆ. ಇದನ್ನು ಓದಿ: ಕಲಬುರಗಿಯಲ್ಲಿ ಏಕಾಏಕಿ ಬಿರುಗಾಳಿಗೆ ಕುಸಿದುಬಿದ್ದ ಕ್ರೇನ್- 6 ಮಂದಿ ದುರ್ಮರಣ
ನಿರ್ಲಕ್ಷ್ಯ ವಹಿಸಿದ್ದಕ್ಕೆ ತಮಿಳನಾಡು ಕನ್ಯಾಕುಮಾರಿಯ ಅರವಿಂದನ್(30), ಒಡಿಶಾದ ಗುಂಜಾಮದ ಪ್ರಶಾಂತ್ (34) ಹಾಗೂ ರವೀಂದ್ರ ರಾವ್ (26) ಮಧ್ಯಪ್ರದೇಶದ ಸಾತ್ನಾ ನಿವಾಸಿ ರಾಕೇಶ್ ಸಿಂಗ್ (44) ಮತ್ತು ಉಜ್ಜೇನಿಯ ದೇವೇಂದ್ರಸಿಂಗ್ (48) ಬಂಧಿತ ಆರೋಪಿಗಳು.
ಅಧಿಕಾರಿಗಳು ಕಾರ್ಮಿಕರಿಗೆ ಸೂಕ್ತ ಸುರಕ್ಷತಾ ಸಾಧನಗಳನ್ನು ಬಳಸದೆ ಕೆಲಸ ಮಾಡಿಸಿದ್ದರು. ಹೀಗಾಗಿ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.