ಮಡಿಕೇರಿ: ಕೊಡಗಿನ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕ್ಷಣ ಕ್ಷಣಕ್ಕೂ ಅದು ದೊಡ್ಡದಾಗುತ್ತಿರುವುದನ್ನು ಕಂಡ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಎರಡು ಅಡಿ ಅಗಲದಷ್ಟು ಬೆಟ್ಟ ಬಾಯ್ದೆರೆದುಕೊಂಡಿದೆ. 10 ಅಡಿ ಆಳ, 200 ಮೀಟರ್ ಉದ್ದದವರೆಗೂ ಬೆಟ್ಟ ಬಿರುಕು ಬಿಟ್ಟುಕೊಂಡಿದೆ. ಅರಣ್ಯ ಇಲಾಖೆ ಎಡವಟ್ಟಿನಿಂದ ಬ್ರಹ್ಮಗಿರಿ ಬೆಟ್ಟಕ್ಕೆ ಕುತ್ತು ಬಂದಿದೆ. ಅರಣ್ಯ ಇಲಾಖೆ ಬೆಟ್ಟದ ಅಲ್ಲಲ್ಲಿ ಸಾಕಷ್ಟು ಇಂಗು ಗುಂಡಿ ತೆಗೆದಿದೆ. ಇಂಗು ಗುಂಡಿ ತೆಗೆದಿರುವುದೇ ಬೆಟ್ಟ ಕುಸಿಯಲು ಕಾರಣ ಎಂದು ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.
Advertisement
Advertisement
ಬೆಟ್ಟ ಕುಸಿಯದಂತೆ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತ ಬಿರುಕು ಬಿಟ್ಟ ಜಾಗಕ್ಕೆ ಪ್ಲಾಸ್ಟಿಕ್ ಹೊದಿಸಿ ಮುಚ್ಚುತ್ತಿದೆ. ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯ ಈ ಕ್ರಮಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕ್ಷಣದಲ್ಲಾದರೂ ಬ್ರಹ್ಮಗಿರಿ ಬೆಟ್ಟ ಕುಸಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದ್ದರಿಂದ ಕಾವೇರಿ ಭಕ್ತರು ಹಾಗೂ ಗ್ರಾಮದಲ್ಲಿ ಆತಂಕದ ಸೃಷ್ಟಿಯಾಗಿದೆ.
Advertisement
Advertisement
ಒಂದು ವೇಳೆ ಬೆಟ್ಟ ಕುಸಿದರೆ, ತಲಕಾವೇರಿಯಲ್ಲಿ ಹುಟ್ಟಿ ನಾಡಿನ ಜನರಿಗೆ ನೀರು ಉಣಿಸುವ ಕಾವೇರಿ ಮಾತೆ ತನ್ನ ದಿಕ್ಕು ಬದಲಾಯಿಸುತ್ತಾಳೆ. ಗುಪ್ತಗಾಮಿನಿಯಾಗಿ ಹೋಗುವ ಜಾಗದಲ್ಲಿ ಬೆಟ್ಟ ಕುಸಿದರೆ, ಪಕ್ಕದ ಕೇರಳಕ್ಕೆ ಕಾವೇರಿ ನದಿ ದಿಕ್ಕು ಬದಲಾಯಿಸುತ್ತದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.