ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸೂಪಾ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ನೀರಿನ ಒತ್ತಡಕ್ಕೆ ಮತ್ತೆ ಡ್ಯಾಂ ಕೆಳಭಾಗದ ರಸ್ತೆಯಲ್ಲಿ ಬಿರುಕು ಬಿಟ್ಟು, ಭೂ ಕುಸಿತವಾಗಿದೆ.
ಇಂದು ಕೂಡ ಸೂಪಾ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದು, ಅಧಿಕ ಒತ್ತಡದ ಹಿನ್ನೆಲೆಯಲ್ಲಿ ಜಲಾಶಯದ ಕೆಳಭಾಗದ ವಿದ್ಯುತ್‍ಗಾರಕ್ಕೆ ಹೋಗುವ ರಸ್ತೆಯಲ್ಲಿ ಕುಸಿತ ಕಂಡುಬಂದಿದೆ. ಸೂಪಾ ಜಲಾಶಯದ 300 ಮೀಟರ್ ದೂರದಲ್ಲಿಯೇ ರಸ್ತೆ ಕುಸಿಯುತ್ತಿರುವುದು ಆತಂಕ ಸೃಷ್ಟಿ ಮಾಡಿದೆ. ಸದ್ಯ ಜಲಾಶಯದಿಂದ 4,652.04 ಒಳ ಹರಿವು ಇದ್ದು, 3,176.09 ಕ್ಯೂಸೆಕ್ಸ್ ನೀರು ಹೊರಕ್ಕೆ ಬಿಡಲಾಗುತ್ತದೆ.
Advertisement
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡ್ಯಾಂ ಚೀಫ್ ಇಂಜಿನಿಯರ್ ನಿಂಗಣ್ಣ, ಸೂಪಾ ಜಲಾಶಯದಿಂದ ಕೇವಲ ಕಡಿಮೆ ಪ್ರಮಾಣದಲ್ಲಿ ನೀರನ್ನು ಬಿಡಲಾಗುತ್ತಿದೆ. ಹೀಗಾಗಿ ನದಿ ತೀರ ಜನರು ಆತಂಕಕ್ಕೆ ಒಳಗಾಗುವುದು ಬೇಡ. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ ಎಂದು ತಿಳಿಸಿದ್ದಾರೆ.
Advertisement
ಈ ಹಿಂದೆ ಜಲಾಶಯದಿಂದ ಬಿಟ್ಟಿದ್ದ ನೀರಿನ ಪ್ರಮಾಣಕ್ಕೆ ಹೋಲಿಸಿದರೆ ಈಗ ಕಡಿಮೆ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಆದರೂ ಕೂಡ ಡ್ಯಾಂನ ಕೆಳಭಾಗದಲ್ಲಿ ಭೂ ಕುಸಿತ ಹೆಚ್ಚಾಗಿದೆ. ಈ ಹಿಂದೆ ಕಾಳಿ ನದಿಯ ಒಳಹರಿವು ಹೆಚ್ಚಾದ ಕಾರಣಕ್ಕೆ ಸೂಪಾ ಜಲಾಶಯದಿಂದ 40 ಸಾವಿರ ಕ್ಯೂಸೆಕ್ಸ್ ನೀರು ಹೊರ ಬಿಡಲಾಗಿತ್ತು. ಆಗ ಹೆಚ್ಚಿನ ಮಳೆ ಹಾಗೂ ಅಧಿಕ ನೀರಿನ ಒತ್ತಡದಿಂದ ಜಲಾಶಯದ ಕೆಳ ಭಾಗದ ರಸ್ತೆ ಹಾಗೂ ಸೇತುವೆ ಬಳಿ ಬಿರುಕು ಕಾಣಿಸಿಕೊಂಡಿತ್ತು.
Advertisement
ನದಿ ಮೈತುಂಬಿ ಹರಿಯುತ್ತಿರುವ ಕಾರಣಕ್ಕೆ ದಾಂಡೇಲಿಯ ಕಾಳಿ ನದಿ ಸೇತುವೆ ಮುಳುಗಡೆಯಾಗಿತ್ತು. ಆಗ ಕಾರವಾರ-ದಾಂಡೇಲಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಅಲ್ಲದೆ ನಗರದ ಸುತ್ತಮುತ್ತ ಕಾಳಿ ನದಿ ನೀರು ಆವರಿಸಿ, ದಾಂಡೇಲಿಯಲ್ಲಿ ಪ್ರವಾಹದ ಭೀತಿ ಎದುರಾಗಿತ್ತು.
ಗುರುವಾರದಂದು ಮಳೆಗೆ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಕಾಳಿ ನದಿಗೆ ಕಟ್ಟಲಾಗಿರುವ ಕೊಡಸಳ್ಳಿ ಜಲಾಶಯದ ಮೇಲ್ಭಾಗದಲ್ಲಿ ಗುಡ್ಡ ಕುಸಿತಗೊಂಡಿರುವ ಬಗ್ಗೆ ವರದಿಯಾಗಿತ್ತು. ಗುಡ್ಡ ಕುಸಿತದಿಂದ ಜಲಾಶಯದ ಮೇಲ್ಭಾಗಕ್ಕೆ ಹಾನಿಯಾಗಿದ್ದು, ಜೋಯಿಡಾ ಭಾಗದ ಬಿರ್ಕೊಲ ಗ್ರಾಮಕ್ಕೆ ಹೋಗುವ ಡ್ಯಾಂ ಮೇಲ್ಭಾಗದ ರಸ್ತೆಯ ಹಲವಡೆ ಬಿರುಕು ಕಾಣಿಸಿಕೊಂಡಿದೆ. ಈಗಾಗಲೇ ಜಲಾಶಯದ ಪ್ರದೇಶ ಅಪಾಯದಲ್ಲಿದ್ದು, ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಕರ್ನಾಟಕ ಪವರ್ ಕಾರ್ಪೊರೇಶನ್ ಲಿಮಿಟೆಡ್(ಕೆಪಿಸಿಎಲ್) ಈ ಮಾರ್ಗದಲ್ಲಿ ಸಂಚರಿಸುವಂತಿಲ್ಲ ಎಂದು ರಸ್ತೆ ಸಂಚಾರ ಸ್ಥಗಿತಗೊಳಿಸಿದ್ದಾರೆ.