ಕಾರವಾರ: ಸುಪಾ ಜಲಾಶಯದಲ್ಲಿ ನೀರು ಬಿಟ್ಟ ಹಿನ್ನೆಲೆ ಜಲಾಶಯದ ಕೆಳಭಾಗದಲ್ಲಿನ ರಸ್ತೆ ಬಿರುಕು ಬಿಟ್ಟು ಆತಂಕ ಮೂಡಿಸಿದೆ.
ಕಳೆದ ಎರಡು ದಿನದಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತಿದ್ದು ಕಾಳಿ ನದಿಯ ಒಳಹರಿವು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸುಪಾ ಜಲಾಶಯದಿಂದ 40 ಸಾವಿರ ಕ್ಯೂಸೆಕ್ಸ್ ನೀರು ಹೊರ ಬಿಡಲಾಗಿತ್ತು. ಹೆಚ್ಚಿನ ಮಳೆ ಹಾಗೂ ಅಧಿಕ ನೀರಿನ ಒತ್ತಡದಿಂದ ಜಲಾಶಯದ ಕೆಳ ಭಾಗದ ರಸ್ತೆ ಹಾಗೂ ಸೇತುವೆ ಬಳಿ ಬಿರುಕು ಕಾಣಿಸಿಕೊಂಡಿದೆ.
Advertisement
Advertisement
ನದಿ ಮೈತುಂಬಿ ಹರಿಯುತ್ತಿರುವ ಕಾರಣಕ್ಕೆ ದಾಂಡೇಲಿಯ ಕಾಳಿ ನದಿ ಸೇತುವೆ ಮುಳುಗಡೆಯಾಗಿದ್ದು, ಕಾರವಾರ-ದಾಂಡೇಲಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಅಲ್ಲದೆ ನಗರದ ಸುತ್ತಮುತ್ತ ಕಾಳಿ ನದಿ ನೀರು ಆವರಿಸುತಿದ್ದು, ದಾಂಡೇಲಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಹೆಚ್ಚಿನ ಮಳೆ ಬಂದಲ್ಲಿ ನಗರ ಪ್ರದೇಶ ನೀರಿನಿಂದ ಮುಳುಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡ್ಯಾಂ ಇಂಜಿನಿಯರ್ ನಿಂಗಣ್ಣ ಅವರು, ಸುಪಾ ಜಲಾಶಯದಿಂದ ಕೇವಲ 40 ಕ್ಯೂಸೆಕ್ ನೀರನ್ನು ಮಾತ್ರ ಬಿಡಲಾಗಿದೆ. ಹೀಗಾಗಿ ನದಿ ತೀರ ಜನರು ಆತಂಕಕ್ಕೆ ಒಳಗಾಗುವುದು ಬೇಡ. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ ಎಂದು ತಿಳಿಸಿದ್ದಾರೆ.