ಮೈಸೂರು: ಪರಿಸರ ಉಳಿಸಿ ಪಟಾಕಿ ತ್ಯಜಿಸಿ ಅಭಿಯಾನವನ್ನು ಹಮ್ಮಿಕೊಂಡಿದ್ದ ಶಾಸಕ ಎಂಕೆ ಸೋಮಶೇಖರ್ ಅವರನ್ನು ಪಟಾಕಿ ಮಾರಾಟಗಾರರು ಮೈದಾನದಿಂದ ಹೊರಗೆ ತಳ್ಳಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಇಂದು ನಗರದ ಪಟಾಕಿ ಮಾರುತ್ತಿರುವ ಜೆಕೆ ಮೈದಾನದಲ್ಲಿ ಶಾಸಕ ಸೋಮಶೇಖರ್ ಅವರು ಪರಿಸರ ಉಳಿಸಿ, ಪಟಾಕಿ ತ್ಯಜಿಸಿ ಅಭಿಯಾನ ಹಮ್ಮಿಕೊಂಡಿದ್ದರು. ಈ ವೇಳೆ ಪಟಾಕಿ ಮಾರಾಟಗಾರರಿಂದ ತೀವ್ರ ಆಕ್ಷೇಪ ಎದುರಾಗಿ ಶಾಸಕರನ್ನು ಮೈದಾನದಿಂದ ಹೊರಕಳುಹಿಸಿ ಗದ್ದಲ ನಡೆಸಿದ್ದಾರೆ.
ಶಾಸಕ ಸೋಮಶೇಖರ್ ಹಾಗೂ ಅವರ ಬೆಂಬಲಿಗರ ಜೊತೆ ಪಟಾಕಿ ಮಾರಾಟಗಾರರು ವಾದ ಪ್ರತಿವಾದಕ್ಕೆ ಇಳಿದಿದ್ದರು. ಈ ವೇಳೆ ಗದ್ದಲ ಹೆಚ್ಚಾಗಿದ್ದರಿಂದ ಪೊಲೀಸರು ಶಾಸಕರ ಆಪ್ತ ಗುಣಶೇಖರ್ ಹಾಗೂ ಮೂವರು ಪಟಾಕಿ ಮಾರಾಟಗಾರರನ್ನು ವಶಕ್ಕೆ ಪಡೆದಿದ್ದಾರೆ.
ಶಾಸಕರನ್ನು ಪಟಾಕಿ ಮಾರಾಟಗಾರರು ತಳ್ಳಿಕೊಂಡು ಹೊರಬಂದ ಕಾರಣ ಮೈದಾನದ ಹೊರಗೆ ಶಾಸಕರು ಧರಣಿ ಕುಳಿತಿದ್ದರು. ನಂತರ ಪಟಾಕಿಯನ್ನು ನೀರಿಗೆ ಹಾಕಿ ಪಟಾಕಿ ಬೇಡ ಎಂಬ ಆಂದೋಲನ ನಡೆಸಿದರು.
ಇದೇ ವೇಳೆಯಲ್ಲಿ ಪಟಾಕಿ ಮಾರಾಟಗಾರರು ಮಾತನಾಡಿ, ಪಟಾಕಿ ಮಾರಾಟ ಮಾಡಲು ಅನುಮತಿ ನೀಡಿದ್ದರು. ಆದರೆ ಈಗ ಪಟಾಕಿ ಮಾರಾಟ ಮಾಡುವುದು ಬೇಡ ಅಂದರೆ ಹೇಗೆ? ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿ ತಮ್ಮ ಪರವಾಗಿ ಘೋಷಣೆ ಕೂಗಿಕೊಂಡರು.
https://youtu.be/CBgDzEJyJnc