ಅಹಮದಾಬಾದ್: ಸತತ ಆರನೇ ಬಾರಿಗೆ ಗುಜರಾತಿನಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿಯಲ್ಲಿ ಆರಂಭದ ದಿನಗಳಲ್ಲಿಯೇ ಭಿನ್ನಮತ ಕಂಡು ಬರುತ್ತಿದೆ. ಸಿಎಂ ವಿಜಯ್ ರೂಪಾನಿ ಮತ್ತು ಡಿಸಿಎಂ ನಿತಿನ್ ಪಟೇಲ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ಗುಜರಾತ್ ಸಂಪುಟ ವಿಸ್ತರಣೆಯಿಂದ ಉಪ ಮುಖ್ಯಮಂತ್ರಿಯಾಗಿರುವ ನಿತಿನ್ ಪಟೇಲ್ ಅಸಮಧಾನಗೊಂಡಿದ್ದಾರೆ ಅಂತಾ ಹೇಳಲಾಗುತ್ತಿದೆ. ಈ ಹಿಂದೆಯೂ ಡಿಸಿಎಂ ಆಗಿ ಕಾರ್ಯ ನಿರ್ವಹಿಸಿದ್ದ ನಿತಿನ್ ಪಟೇಲರ ಬಳಿ ಹಣಕಾಸು ಸಚಿವಾಲಯ, ನಗರಾಭಿವೃದ್ಧಿ, ಉದ್ಯಮ ಮತ್ತು ಆದಾಯ ಖಾತೆಗಳಿದ್ದವು. ಆದರೆ ಈ ಬಾರಿ ಪಟೇಲರಿಗಿಂತ ಕಿರಿಯರಾಗಿರುವ ಸೌರಭ್ ಪಟೇಲ್ ಅವರಿಗೆ ಇಂಧನ ಹಾಗೂ ಹಣಕಾಸು ಸಚಿವಾಲಯ ಜವಬ್ದಾರಿಯನ್ನು ನೀಡಲಾಗಿದೆ. ಇನ್ನು ಸಿಎಂ ರೂಪಾನಿ ಗೃಹ ಖಾತೆ ಹಾಗೂ ನಗರಾಭಿವೃದ್ಧಿ ಖಾತೆಯನ್ನ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.
ಸಂಪುಟ ವಿಸ್ತರಣೆಯಿಂದಾಗಿ ಅಸಮಧಾನಗೊಂಡಿರುವ ನಿತಿನ್ ಪಟೇಲ್, ಗುರುವಾರ ನಡೆದ ಕ್ಯಾಬಿನೆಟ್ ಸಭೆಗೆ ತಡವಾಗಿ ಆಗಿಮಿಸಿದ್ದರು. ಸಿಎಂ ರೂಪಾನಿ ಖುದ್ದು ನಿತಿನ್ ಪಟೇಲ್ ಅವರ ಮನೆಗೆ ತೆರಳಿ ಸುದೀರ್ಘ ಮಾತುಕತೆಯ ಬಳಿಕ ಕ್ಯಾಬಿನೆಟ್ ಮೀಟಿಂಗ್‍ನಲ್ಲಿ ಭಾಗಿಯಾದರು. ಹೀಗಾಗಿ ಸಂಜೆ 5 ಗಂಟೆಗೆ ಆರಂಭವಾಗಬೇಕಿದ್ದ ಸಭೆ ರಾತ್ರಿ 9 ಗಂಟೆಗೆ ನಡೆಸಲಾಯಿತು.
ಎರಡು ಮೂರು ದಿನಗಳಲ್ಲಿ ನಿತಿನ್ ಪಟೇಲ್ ಅವರಿಗೆ ಹಣಕಾಸು ಸಚಿವಾಲಯದ ಜವಾಬ್ದಾರಿ ನೀಡದೇ ಇದ್ದಲ್ಲಿ, ಆತ್ಮಗೌರವಕ್ಕಾಗಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಹಿಂದೆ ಆನಂದಿಬೆನ್ ಮತ್ತು ವಿಜಯ್ ರೂಪಾನಿ ಮುಖ್ಯಮಂತ್ರಿಯಾಗಿದ್ದಾಗ ನಿತಿನ್ ಪಟೇಲ್ ಅವರೇ ಹಣಕಾಸು ಸಚಿವಾಲಯವನ್ನು ನಿರ್ವಹಿಸುತ್ತಿದ್ದರು. ಈ ಬಾರಿ ನಿತಿನ್ ಪಟೇಲ್ ಗೃಹ ಇಲಾಖೆ ಮತ್ತು ಹಣಕಾಸು ಸಚಿವಾಲಯದ ಮೇಲೆ ಕಣ್ಣಿಟ್ಟಿದ್ದಾರೆ. ಸದ್ಯ ನಿತಿನ್ ಪಟೇಲರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ , ರಸ್ತೆ ಮತ್ತು ಕಟ್ಟಡ ಹಾಗೂ ನರ್ಮದಾ, ಕಲ್ಪರ್ಸ್ ಯೋಜನೆಯ ಜವಾಬ್ದಾರಿ ನೀಡಲಾಗಿದೆ.