ಚಿಕ್ಕಬಳ್ಳಾಪುರ: ಚುನಾವಣೆಗೆ ನಿಲ್ಲಬೇಕು ಎಂದರೆ ಕೈಯಲ್ಲಿ ಕೋಟಿ-ಕೋಟಿ ದುಡ್ಡು ಇರಬೇಕು ಎನ್ನುವ ದುಸ್ಥಿತಿಯಲ್ಲಿ ಇಲ್ಲೊಬ್ಬ ಅಭ್ಯರ್ಥಿ ಚುನಾವಣೆಗೆ ಬೇಕಾದ ಹಣವನ್ನು ಮತದಾರರಿಂದಲೇ ಪಡೆದು ಎಂಎಲ್‍ಎ ಆಗಲು ಹೊರಟಿದ್ದಾರೆ.
ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಗೆ ಚುನಾವಣಾ ಪ್ರಚಾರದ ಮತಯಾಚನೆ ವೇಳೆ ಮತದಾರರೇ ಸ್ವಯಂಪ್ರೇರಿತವಾಗಿ ದುಡ್ಡು ಕೊಟ್ಟು ಬೆಂಬಲ ಸೂಚಿಸುತ್ತಿದ್ದಾರೆ. ಕ್ಷೇತ್ರಾದ್ಯಂತ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಜಿವಿ ಶ್ರೀರಾಮರೆಡ್ಡಿ ಅವರಿಗೆ ಜನರೇ ಹಣ ನೀಡುವ ಮೂಲಕ ಚುನಾವಣೆಯಲ್ಲಿ ಗೆದ್ದು ಬರುವಂತೆ ಆರ್ಶೀವಾದ ಮಾಡುತ್ತಿದ್ದಾರೆ.
Advertisement
Advertisement
ಸಿಪಿಐಎಂ ಪಕ್ಷವನ್ನ ಬೆಂಬಲಿಸುತ್ತಿರುವ ಜನರು 100, 200, 500 ರಿಂದ 1 ಸಾವಿರ ರೂ, ವರೆಗೂ ಸ್ವಯಂಪ್ರೇರಿತವಾಗಿ ತಮ್ಮ ಕೈಲಾದಷ್ಟು ಹಣ ಸಹಾಯ ಮಾಡುತ್ತಿದ್ದಾರೆ. ಈ ಮೂಲಕ ಚುನಾವಣೆಗೆ ಬೇಕಾದ ಖರ್ಚಿನ ಹಣ ದೇಣಿಗೆ ರೂಪದಲ್ಲಿ ನೀಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಜಿವಿ ಶ್ರೀರಾಮರೆಡ್ಡಿಯವರಿಗೆ ಈಗಾಗಲೇ ಎರಡು ಲಕ್ಷ ರೂ.ಗಿಂತಲೂ ಅಧಿಕ ಮೊತ್ತದ ಹಣ ದೇಣಿಗೆ ರೂಪದಲ್ಲಿ ದೊರಕಿದೆ ಎನ್ನಲಾಗಿದೆ.
Advertisement
ಸಿಪಿಐಎಂ ಪಕ್ಷ ರಾಜ್ಯದ ಕರಾವಳಿ ಭಾಗ ಹಾಗೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸದೃಢವಾಗಿದ್ದು, ಹೀಗಾಗಿ ಈ ಹಿಂದೆ ಇದೇ ಕ್ಷೇತ್ರದಿಂದ ಜಿವಿ ಶ್ರೀರಾಮರೆಡ್ಡಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು ಎನ್ನುವುದು ಈ ಕ್ಷೇತ್ರದ ವಿಶೇಷ.