ರಾಮನಗರ: ಕುಮಾರಸ್ವಾಮಿಯವರು (HD Kumaraswamy) ಚುನಾವಣೆ (Election) ಮುಗಿದ ತಕ್ಷಣ ಕಿಂಗ್ ಮೇಕರ್ ಆಗುತ್ತೇನೆ ಎಂಬ ಅಹಂನಿಂದ ವಿದೇಶಕ್ಕೆ ಹಾರಿದ್ದರು. ಆದರೆ ಕರೆಯಲು ಯಾರೂ ಹೋಗದ ಕಾರಣ ಅವರೇ ವಾಪಾಸ್ ಬರಬೇಕಾಯಿತು ಎಂದು ಮಾಜಿ ಸಚಿವ ಸಿಪಿ ಯೋಗೇಶ್ವರ್ (CP yogeshwara) ವ್ಯಂಗ್ಯವಾಡಿದ್ದಾರೆ.
ಚನ್ನಪಟ್ಟಣದಲ್ಲಿ (Channapatana) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಚನ್ನಪಟ್ಟಣಕ್ಕೆ ಬರಬಾರದಿತ್ತು. ಅದಕ್ಕಾಗಿಯೇ ನಾನು ಸೋತಿದ್ದೇನೆ. ನನ್ನನ್ನು ಸೋಲಿಸಿದವರೂ ಸಹ ಸಂಪೂರ್ಣವಾಗಿ ಸೋತು ಹೋಗಿದ್ದಾರೆ. ಜೊತೆಗೆ ತಮ್ಮ ಮಗನನ್ನು ಸೋಲಿಸಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಧರ್ಮಗುರು ಹೆಂಡತಿಯನ್ನು ಹೇಗೆ ಕೊಂದ? – ಗೂಗಲ್ ಸರ್ಚ್‍ನಿಂದ ಸಿಕ್ಕಿಬಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ
ಚುನಾವಣೆಗಳು ಬರುತ್ತಲೇ ಇರುತ್ತವೆ. ನಾನು ಐದು ಬಾರಿ ಶಾಸಕನಾಗಿದ್ದೇನೆ. ನಾಲ್ಕು ಬಾರಿ ಸೋತಿದ್ದೇನೆ. ಜನ ಕಾಂಗ್ರೆಸ್‍ಗೆ (Congress) ಹೋಗಬೇಕಿತ್ತು, ಪಕ್ಷೇತರವಾಗಿ ಸ್ಪರ್ಧಿಸಬೇಕಿತ್ತು ಎಂದು ಮಾತನಾಡುತ್ತಿದ್ದಾರೆ. ಇದೇನು ಕೊನೆಯ ಚುನಾವಣೆಯಲ್ಲ. ನಾನು ಸೋತಿದ್ದರೂ ಜನರ ಮುಂದೆ ಬಂದಿದ್ದೇನೆ. ನನ್ನ ಗೆಲ್ಲಿಸಬೇಕೆಂದು ಶ್ರಮಪಟ್ಟವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.
ಒಕ್ಕಲಿಗ ಜನಾಂಗದ ವ್ಯಕ್ತಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಾರೆ ಎಂಬ ಅಂಧಾಭಿಮಾನದಿಂದ ಜನ ಮತ ನೀಡಿದ್ದರಿಂದ ನಾನು ಸೋತಿದ್ದೇನೆ. ಬಹುಮತ ಪಡೆದಿರುವ ಕಾಂಗ್ರೆಸ್ ಸರ್ಕಾರ ತೂಕದ ಸರ್ಕಾರವಾಗಿದೆ. ಬಹುತೇಕ ಹಿರಿಯರು ಗೆದ್ದಿದ್ದಾರೆ. ಸರಿದೂಗಿಸಿಕೊಂಡು ಹೋಗುವುದು ಕಷ್ಟಸಾಧ್ಯ. ಮುಂದಿನ ಐದು ವರ್ಷಗಳ ಕಾಲ ಈ ಸರ್ಕಾರ ಏನಾಗುತ್ತದೆಯೋ ಎಂಬುದನ್ನು ಹೇಳಲು ಆಗುವುದಿಲ್ಲ ಎಂದಿದ್ದಾರೆ.
ನಾನು ಇನ್ನೂ ಮೂರು ವರ್ಷಕ್ಕೂ ಹೆಚ್ಚಿನ ಕಾಲ ವಿಧಾನ ಪರಿಷತ್ ಸದಸ್ಯನಾಗಿರುತ್ತೇನೆ. ನಾನು ಇಲ್ಲಿನ ಮಣ್ಣಿನ ಮಗ. ನಾನು ಇಲ್ಲಿಯೇ ಇರುತ್ತೇನೆ. ಯುಜಿಡಿ ಯಂತಹ ಹಲವಾರು ಅಭಿವೃದ್ಧಿ ಕೆಲಸಗಳನ್ನು ನಾನೇ ಮಾಡಬೇಕು. ನಮ್ಮ ಸೋಲನ್ನು ಈ ಮಹದೇಶ್ವರ ಸನ್ನಿಧಿಯಲ್ಲೇ ಮರೆತು ಬಿಡೋಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿದ್ಯುತ್ ಬಿಲ್ ನೀಡಲು ಬಂದ ಸಿಬ್ಬಂದಿಗೆ ಮಹಿಳೆ ಹಿಗ್ಗಾಮುಗ್ಗ ಕ್ಲಾಸ್