Wednesday, 18th July 2018

Recent News

ಬೇನಾಮಿ ಗಿಫ್ಟ್ ಪಡೆಯೋದ್ರಲ್ಲಿ ಡಿಕೆಶಿ ನಿಸ್ಸೀಮರು, ಮುಂದೆ ದಾಖಲೆ ಬಿಡುಗಡೆ: ಯೋಗೇಶ್ವರ್

ರಾಮನಗರ: ಇಂಧನ ಸಚಿವ ಡಿಕೆ ಶಿವಕುಮಾರ್ ಬೇನಾಮಿ ಆಸ್ತಿ ಮಾಡಿದ್ದಾರೆ. ಬೇನಾಮಿ ಗಿಫ್ಟ್ ಪಡೆಯೋದರಲ್ಲಿ ಅವರು ನಿಸ್ಸೀಮರು. ಅದರ ದಾಖಲೆಗಳಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಜನರ ಮುಂದಿಡ್ತೇನೆಂದು ಶಾಸಕ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಹಾಗೂ ಪಾವಗಡದಲ್ಲಿ ಸಚಿವ ಡಿಕೆಶಿ ಬೇನಾಮಿ ಆಸ್ತಿ ಮಾಡಿದ್ದಾರೆ. ನನಗೆ ಬೇನಾಮಿ ಆಸ್ತಿಯ ಗಿಫ್ಟ್ ಕೊಡುವ ಆಗತ್ಯವಿಲ್ಲ. ತಾಲೂಕಿನ ಜನ ಎಲ್ಲ ಗಿಫ್ಟ್ ಕೊಟ್ಟಿದ್ದು ಅವರ ಗಿಫ್ಟ್ ಬೇಕಾಗಿಲ್ಲ. ಡಿಕೆಶಿ ರಾಜಕೀಯ ಜೀವನ ಬಹುಶಃ ಇಲ್ಲಿಗೆ ಮುಗಿಯುತ್ತಿದ್ದು, ಸ್ವಾರ್ಥಕ್ಕಾಗಿ ಸಾರ್ವಜನಿಕ ಜೀವನ ಬಳಸಿಕೊಂಡಿದ್ದಾರೆ. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

ಪರಿವರ್ತನ ಯಾತ್ರೆಯ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ಇಂದು ಪರಿವರ್ತನೆಯ ವಾತಾವರಣ ಸೃಷ್ಟಿಯಾಗ್ತಿದೆ. ಮುಂದಿನ ದಿನದಲ್ಲಿ ಬಿಜೆಪಿ ರಾಜ್ಯಕ್ಕೆ ಬೇಕೆಂದು ಜನರು ಕೈ ಜೋಡಿಸ್ತಿದ್ದಾರೆ. ತಾಲೂಕು ಮುಖಂಡರೆಲ್ಲಾ ಬಿಜೆಪಿಗೆ ಸೇರ್ಪಡೆಯಾಗ್ತಿದ್ದೇವೆ. ಕನಕಪುರದ ನಂದಿನಿಗೌಡರವರು ಕೂಡಾ ಬಿಜೆಪಿ ಸೇರುತ್ತಿದ್ದಾರೆ. ನಾನು ಯಾವುದೇ ನಿಬಂಧನೆಗಳನ್ನ ಒಡ್ಡಿ ಪಕ್ಷ ಸೇರುತ್ತಿಲ್ಲ. ಯೋಗ್ಯತೆಗೆ ತಕ್ಕಂತೆ ದುಡಿಸಿಕೊಳ್ಳುತ್ತೆ ಎನ್ನುವ ಭರವಸೆಯಿದೆ ಎಂದರು.

ಡಿಕೆಶಿಗೆ ನಾವು ಬೆಂಬಲ ಕೊಟ್ಟಾಗ ರಾಜಕೀಯವಾಗಿ ಬಹಳ ಶಕ್ತಿವಂತರಾಗಿದ್ದರು. ಇವತ್ತು ಯಾರಿಗೆ ಶಕ್ತಿ ಕೊಟ್ಟಿದ್ದೇವೆ ಅಂತಾ ಅರ್ಥವಾಗಿದೆ. ಅವರಿಂದ ತಾಲೂಕಿಗೆ ಕೊಡುಗೆ ಶೂನ್ಯ, ಅವರು ಕೆಲಸಗಳೇನು ಮಾಡಿಲ್ಲ. ಮತ ಹಾಕಿಸಿಕೊಂಡು ಮುಖಂಡರ ಮನೆಗೆ ಹೋಗಿ ಅವರ ಸಂತೃಪ್ತಿಗೊಳಿಸುತ್ತಿದ್ದಾರೆ. ಅವರ ಅನುಕೂಲಕ್ಕಾಗಿ ಬಂದು ಸಹಾಯ ಬೇಡಿದ್ರು, ಸಹಾಯ ಮಾಡಿದ್ವಿ. ಆದರೆ ಸರ್ಕಾರ ಮುಗಿಯುತ್ತಾ ಬಂದ್ರೂ ಅನುಕೂಲವಾಗದಿದ್ದಾಗ ಮಾತನಾಡಲೇಬೇಕಾಗಿದೆ. ನಾನು ಬಿಜೆಪಿಗೆ ಹೋಗ್ತಿರುವ ಸಂಕಟ ಅವರನ್ನ ಕಾಡ್ತಿದೆ ಎಂದು ಹೇಳಿದ್ದಾರೆ.

ಬುಧವಾರ ಆಪ್ತರ ಮನೆಗೆ ಸಚಿವ ಡಿಕೆಶಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿ ಅವರು ಭೇಟಿ ಮಾಡಿದ್ದ ಮುಖಂಡರೆಲ್ಲಾ ಈಗ ನಮ್ಮ ಜೊತೆಯಲ್ಲಿಯೇ ಇದ್ದಾರೆ. ಅವರು ಬರ್ತಾರೆ, ಬಲವಂತಕ್ಕೆ ಬಂದು ಡ್ರಾಮಾ ಮಾಡಿ ಹೋಗ್ತಾರೆ. ಅವರನ್ನ ತಾಲ್ಲೂಕಿನ ಜನ ನಂಬುವ ಸ್ಥಿತಿಯಲ್ಲಿಲ್ಲ. ಅದಕ್ಕೆ ಅಂತಹ ಮಹತ್ವ ಕೊಡುವ ಅಗತ್ಯ ಸಹ ಇಲ್ಲ. ಜನಗಳ ಕೆಲಸ ಮಾಡಬೇಕಾದ್ದು ಅವರ ಕರ್ತವ್ಯ. ಅವರು 30 ವರ್ಷಗಳಿಂದ ಈ ಕೆಲಸ ಮಾಡಬೇಕಿತ್ತು. ಇಂದು ಕಾಂಗ್ರೆಸ್ ಅಧಿಕಾರ ಮುಗಿಸುವಂತಹ ಸಮಯ. ಕೊನೆಯಗಳಿಗೆಯಲ್ಲಿ ವಾರಕ್ಕೊಮ್ಮೆ ಬರ್ತೀನಿ ಅಂತಿದ್ದಾರೆ. ಅವರಿಗೆ ನಾನು ಬಿಜೆಪಿಗೆ ಸೇರುತ್ತಿರುವುದು ನೋವಿದೆ. ಅವರ ರಾಜಕೀಯ ಉನ್ನತಿಗೆ ತಾಲೂಕು ಮುಖ್ಯವಾಗಿತ್ತು. ತಾಲೂಕಿನ ಜನ ಪರಿವರ್ತನೆ ಆಗ್ತಿರೋದು ಅವರ ಹತಾಶೆಗೆ ಕಾರಣವಾಗಿದೆ. ಇವತ್ತು ನಮಗೆ ಶುಭದಿನ, ಮುಂದಿನ ದಿನಗಳಲ್ಲಿ ಅವರ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆಂದು ಹೇಳಿದರು.

Leave a Reply

Your email address will not be published. Required fields are marked *