Connect with us

Districts

ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಶಾಸಕ ಸಿ.ಪಿ.ಯೋಗೇಶ್ವರ್-ಡಿಕೆಶಿ ವಿರುದ್ಧ ತೀವ್ರ ವಾಗ್ದಾಳಿ

Published

on

ರಾಮನಗರ: ಕಾಂಗ್ರೆಸ್ ಪಕ್ಷಕ್ಕೆ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಸುದ್ದಿಗೋಷ್ಠಿ ನಡೆಸಿದ ಯೋಗೇಶ್ವರ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಹ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ವಿಚಾರವನ್ನು ತಿಳಿಸಿದರು.

ಇನ್ನು ಮುಂದೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಭಾವಚಿತ್ರ ಹೆಸರು ಬಳಸುವುದು ಬೇಡ. ಕಾಂಗ್ರೆಸ್ ಪಕ್ಷದ ವರಿಷ್ಟರು ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಸಾರ್ವಜನಿಕ ಬದುಕಿನಲ್ಲಿ ನನ್ನನ್ನು ಸರಿಯಾಗಿ ಬಳಕೆ ಮಾಡಲಿಲ್ಲ. ನಾಯಕರಿಗೆ ನನ್ನ ಅವಶ್ಯಕತೆ ಇಲ್ಲ ಎನ್ನುವುದು ನನ್ನ ಭಾವನೆ. ಜಿಲ್ಲೆಯಲ್ಲಿ ಏಳೆಂಟು ಜನ ನಾಯಕರುಗಳ ಬಲಿಷ್ಠತ್ವ ಕಾಂಗ್ರೆಸ್ ಪಕ್ಷಕ್ಕಿದೆ ಎಂದು ತಿಳಿಸಿದರು.

ಡಿಕೆಶಿ ವಿರುದ್ಧ ವಾಗ್ದಾಳಿ: ಮೊದಲನೇ ಬಾರಿ ನಾನು ಕಾಂಗ್ರೆಸ್ ನಲ್ಲಿದ್ದಾಗ ನನಗೆ ಕೊಟ್ಟಿರುವ ಟಿಕೆಟನ್ನು ಮಾನ್ಯ ಡಿ.ಕೆ.ಶಿವಕುಮಾರ್ ಅವರು ನನ್ನ ಮುಂದೆಯೇ ಹರಿದು ಹಾಕಿದರು. 20 ವರ್ಷಗಳ ನಂತರ ಮತ್ತೆ ಕಾಂಗ್ರೆಸ್ ಗೆ ಬಂದರೂ ಹಿಂದಿನ ಚುನಾವಣೆಯಲ್ಲಿ ಬೇಡ ಅಂದವರಿಗೆ ಟಿಕೆಟ್ ನೀಡಿ ನನಗೆ ನೀಡಲಾಗುತ್ತಿದ್ದ ಟಿಕೆಟ್ ನ್ನು ತಪ್ಪಿಸಿದರು. ಭಾನುವಾರ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಶಿವಕುಮಾರ್ ಅವರು 1 ಕೋಟಿ ರೂ. ನೀಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ ಎಂದು ಆರೋಪಿಸಿದರು.

ಹಣ ಬಲವಿಲ್ಲ, ನನಗೆ ಜನಬಲ: ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದಾಗ ಅಷ್ಟು ಹಣ ಸಿಕ್ಕತ್ತು, ತೆಗೆದುಕೊಂಡು ಹೋದರು ಅಂತಾ ಹೇಳುತ್ತಿದ್ದರು. ಆದರೆ ನಾವೆಲ್ಲ ಆ ರೀತಿ ಏನು ಇಲ್ಲ ಅಂತಾ ಅನ್ನಿಸುತ್ತದೆ. ಆದರೆ ದೇಶದ ಯಾವುದೇ ಕಾನೂನುಗಳು ಶಿವಕುಮಾರ್ ಅವರನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ನನಗೂ ಬಂದಿದೆ. ಇವತ್ತು ನಮ್ಮ ತಾಲೂಕಿನಲ್ಲಿ ಹಂಚಿಕೆ ಆಗುತ್ತಿರುವ ಹಣ ನೋಡಿದರೆ ದೇಶದಲ್ಲಿರುವ ಕಾನೂನುಗಳನ್ನು ಅವರನ್ನು ಆರ್ಥಿಕವಾಗಿ ಮುಟ್ಟಲು ಆಗುವುದಿಲ್ಲ ಎಂಬ ಆತಂಕ ನನ್ನಲ್ಲಿ ಮೂಡಿದೆ. ಶಿವಕುಮಾರ್ ಅವರಿಗೆ ಹಣಬಲ ಇರಬಹುದು, ನನಗೆ ಜನ ಬಲವಿದೆ. ಜನ ಬೆಂಬಲದ ಮೇಲೆ ನಾನು ಇವತ್ತು ಕಾಂಗ್ರೆಸ್ ಪಕ್ಷವನ್ನು ತ್ಯಜಿಸುವ ನಿರ್ಧಾರ ಮಾಡಿದ್ದೇನೆ. ನನ್ನ ದಾರಿಯನ್ನು ನಾನು ಮುಂದಿನ ದಿನಗಳಲ್ಲಿ ನೋಡಿಕೊಳ್ಳುತ್ತೇನೆ ಅಂತಾ ತಿಳಿಸಿದರು.

ನಾಯಕತ್ವದಲ್ಲಿ ಕಿತ್ತಾಟ: ಕನಕಪುರ ಕ್ಷೇತ್ರದಲ್ಲಿ ಪ್ರಬಲ ಮೂರು ಜನ ನಾಯಕರಿದ್ದಾರೆ. ರಾಮನಗರದ ಕ್ಷೇತ್ರದ ಲಿಂಗಪ್ಪ ಅವರು ಎಂಎಲ್‍ಸಿ ಆಗಿದ್ದಾರೆ. ರೇವಣ್ಣ ಅವರು ಸಹ ಎಂಎಲ್‍ಸಿ ಆಗಿ ಮಂತ್ರಿಗಳಾಗಿದ್ದಾರೆ. ಮಾಗಡಿ ಕ್ಷೇತ್ರದ ನಾಯಕರಾದ ಬಾಲಕೃಷ್ಣ ಅವರು ಪಕ್ಷಕ್ಕೆ ಬಂದಿದ್ದಾರೆ. ಇರೋದು ನಾಲ್ಕು ತಾಲೂಕಿನ ಸಣ್ಣದೊಂದು ಜಿಲ್ಲೆ ರಾಮನಗರ ಹಾಗಾಗಿ ನಾಯಕತ್ವದಲ್ಲಿ ಸಣ್ಣದೊಂದು ಕಿತ್ತಾಟವಿದೆ ಎಂದರು.

ಕ್ಷೇತ್ರಕ್ಕೆ ಅನುದಾನವಿಲ್ಲ: ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದರೂ, ತಾಲೂಕಿನ ಅಭಿವೃದ್ದಿಗೆ ಪ್ರೋತ್ಸಾಹ ದೊರಕಲಿಲ್ಲ ಹಾಗೂ ವಿಶೇಷವಾದ ಅನುದಾನ ನನ್ನ ತಾಲೂಕಿಗೆ ಸಿಗಲಿಲ್ಲ. ನಮ್ಮ ಜೊತೆ ಕೆಲಸ ಮಾಡುವ ಮುಖಂಡರಿಗೆ ಸರಿಯಾದ ಸ್ಥಾನಮಾನಗಳು ಸಿಗುತ್ತಿಲ್ಲ. ತಾಲೂಕಿನಲ್ಲಿ ಕಳೆದ ಎರಡು ಮೂರು ವರ್ಷಗಳಲ್ಲಿ ರಸ್ತೆಗಳು ಹಾಳಾಗಿವೆ. ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನಮ್ಮನ್ನು ಸಮಯಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವುದು ನಮಗೆ ಗೊತ್ತಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ದೂರ ಹೋಗಬೇಕೆಂದು ತೀರ್ಮಾನಿಸಿದ್ದೇವೆ ಎಂದರು.

ಕಾಂಗ್ರೆಸ್ ಪಕ್ಷದಿಂದ ಹೊರ ಬಂದು 22ನೇ ತಾರೀಖಿನಂದು ನಗರದ ಚೌಡೇಶ್ವರಿ ಭವನದಲ್ಲಿ ಸಭೆಯನ್ನು ಕರೆಯಲಾಗಿದ್ದು, ಸಭೆಯಲ್ಲಿ ಕ್ಷೇತ್ರದ ಮುಖಂಡರು ಭಾಗಿಯಾಗಲಿದ್ದಾರೆ. ಅಂದು ನಮ್ಮ ಸಾರ್ವಜನಿಕ ಬದುಕಿನ ಬಗೆಗಿನ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಲಾಗುದು ಎಂದು ಯೋಗೇಶ್ವರ್ ಹೇಳಿದರು.

Click to comment

Leave a Reply

Your email address will not be published. Required fields are marked *