Connect with us

Districts

ಇಂದು ಚನ್ನಪಟ್ಟಣದಲ್ಲಿ ಸಿಎಂ ಶಕ್ತಿಪ್ರದರ್ಶನ- ಸಾಧನಾ ಸಮಾವೇಶಕ್ಕೆ ಶಾಸಕ ಸಿಪಿ ಯೋಗೇಶ್ವರ್ ಗೈರಾಗಲು ನಿರ್ಧಾರ

Published

on

ರಾಮನಗರ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಸಿಪಿ ಯೋಗೇಶ್ವರ್ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದ್ದು, ಸರ್ಕಾರದ ಸಾಧನಾ ಸಮಾವೇಶ ಇಂದು ಜಿಲ್ಲೆಯ ಚನ್ನಪಟ್ಟಣ ಹಾಗೂ ಮಾಗಡಿ ಕ್ಷೇತ್ರದಲ್ಲಿ ನಡೆಯಲಿದೆ.

ರಾಮನಗರದ ಚನ್ನಪಟ್ಟಣ ಮತ್ತು ಮಾಗಡಿ ವಿಧಾನಸಭೆ ಕ್ಷೇತ್ರಗಳಿಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಮತ್ತು ಸಾಧನಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಚನ್ನಪಟ್ಟಣದ ಪದವಿ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇಂಧನ ಸಚಿವ ಡಿ.ಕೆ ಶಿವಕುಮಾರ್, ಸಾರಿಗೆ ಸಚಿವ ಎಚ್ ಎಂ ರೇವಣ್ಣ ಸಿದ್ದರಾಮಯ್ಯಗೆ ಸಾಥ್ ನೀಡಲಿದ್ದಾರೆ.

ಇಂದು ಈ ಸಮಾವೇಶ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗುವ ಸಾಧ್ಯತೆ ಇದೆ. ಅಲ್ಲದೆ ಈ ಹಿಂದೆ ಸಿಪಿ ಯೋಗೇಶ್ವರ್ ಗೆ ಸವಾಲು ಹಾಕಿದ್ದ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರ ಚನ್ನಪಟ್ಟಣಕ್ಕೆ ಏನೇನು ಕೊಡುಗೆ ಕೊಟ್ಟಿದೆ ಮತ್ತು ಯೋಗೇಶ್ವರ್ ಏನು ಕೆಲಸ ಮಾಡಿದ್ದಾರೆ ಅನ್ನೋದನ್ನು ಚನ್ನಪಟ್ಟಣಕ್ಕೆ ಬಂದೇ ಹೇಳುತ್ತೆ ಎಂದಿದ್ದರು. ಆದರೆ ಈಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಶಾಸಕ ಸಿಪಿ ಯೋಗೇಶ್ವರ್ ಸಮಾವೇಶಕ್ಕೆ ಗೈರಾಗಲು ತೀರ್ಮಾನಿಸಿದ್ದಾರೆ.

ತಮಗೆ ಸಚಿವ ಸ್ಥಾನ ಸಿಗದಿರಲು ಸಚಿವ ಡಿಕೆಶಿಯೇ ಎಂಬ ಸಿಟ್ಟಿಗೆ ಯೋಗೇಶ್ವರ್ ಕಾಂಗ್ರೆಸ್ ತೊರೆದಿದ್ದು, ಚನ್ನಪಟ್ಟಣದಲ್ಲಿ ಇಂದು ನಡೆಯುತ್ತಿರುವ ಸಮಾವೇಶ ಕೇವಲ ಸರ್ಕಾರದ ಸಮಾವೇಶ ಅಷ್ಟೇ ಅಲ್ಲ ತಮ್ಮ ವಿರುದ್ಧದ ರಾಜಕೀಯ ರಣಕಹಳೆ ಎಂದು ಸಮಾವೇಶಕ್ಕೆ ಗೈರಾಗಲು ತೀರ್ಮಾನಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಚನ್ನಪಟ್ಟಣದ ಕೆರೆ ತುಂಬುವ ಯೋಜನೆಗೆ ಸಾವಿರ ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿತ್ತು. ಅಷ್ಟಾಗಿಯು ಪಕ್ಷ ತೊರೆದ ಯೋಗೇಶ್ವರ್ ರನ್ನ ಚನ್ನಪಟ್ಟಣದಲ್ಲೇ ಈ ಬಾರಿ ಸೋಲಿಸಬೇಕು ಎಂಬ ಹಟಕ್ಕೆ ಬಿದ್ದಿರುವ ಸಚಿವ ಡಿಕೆಶಿ, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇಂದು ಬೃಹತ್ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದಾರೆ. ಇಂದಿನ ಸಮಾವೇಶದಲ್ಲಿ ಸಿ.ಪಿ.ಯೋಗೇಶ್ವರ್ ವಿರುದ್ಧ ನಾಯಕರ ವಾಗ್ದಾಳಿ ನಡೆಯುವ ಸಾಧ್ಯತೆ ಇದೆ.

ಇವತ್ತಿನ ಸಾಧನಾ ಸಮಾವೇಶ ರಾಜಕೀಯ ಕಾರಣಕ್ಕಾಗಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಚನ್ನಪಟ್ಟಣ ಶಾಸಕ ಯೋಗೇಶ್ವರ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಕಾರಣ ಚನ್ನಪಟ್ಟಣದ ಇಂದಿನ ಸಮಾವೇಶ ಸಾಕಷ್ಟು ಕುತೂಹಲ ಮೂಡಿಸಿದೆ.

Click to comment

Leave a Reply

Your email address will not be published. Required fields are marked *