ಡೆಹ್ರಾಡೂನ್: ಹಸುಗಳು ಆಮ್ಲಜನಕವನ್ನು ಉಸಿರಾಡಿ, ಆಮ್ಲಜನಕವನ್ನು ಹೊರ ಬಿಡುವ ಏಕೈಕ ಪ್ರಾಣಿ ಎಂದು ಉತ್ತರಾಖಂಡ್‍ನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
ಡೆಹ್ರಾಡೂನ್‍ನಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾವತ್ ಅವರು ಹಸುವನ್ನು ಹೊಗಳುವ ಸಮಯದಲ್ಲಿ, ಹಸು ಆಮ್ಲಜನಕವನ್ನು ಹೊರಬಿಡುತ್ತದೆ. ಹಸುವನ್ನು ಮಸಾಜ್ ಮಾಡುವುದರಿಂದ ಮನುಷ್ಯನ ಉಸಿರಾಟದ ಸಮಸ್ಯೆ ಗುಣವಾಗುತ್ತದೆ ಎಂದು ಹೇಳಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದೆ.
ಹಸುವಿನ ಹಾಲು ಮತ್ತು ಮೂತ್ರದಲ್ಲಿ ಔಷಧೀಯ ಗುಣಗಳು ಹೆಚ್ಚಾಗಿ ಇರುತ್ತೇವೆ ಎಂದು ಹೇಳುವ ಬರದಲ್ಲಿ ರಾವತ್ ಅವರು ಹಸು ಅಮ್ಲಜನಕವನ್ನು ಹೊರಬಿಡುತ್ತದೆ. ಹಸುವನ್ನು ಮಸಾಜ್ ಮಾಡುವುದರಿಂದ ಮನುಷ್ಯನಿಗೆ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ. ಹಸುವಿನ ಜೊತೆ ಹತ್ತಿರದಲ್ಲಿ ವಾಸಿಸುವುದರಿಂದ ಕ್ಷಯರೋಗ ಗುಣವಾಗುತ್ತದೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಉತ್ತರಾಖಂಡ್‍ನ ಬಿಜೆಪಿ ಅಧ್ಯಕ್ಷ ಮತ್ತು ನೈನಿತಾಲ್ ಕ್ಷೇತ್ರದ ಶಾಸಕ ಅಜಯ್ ಭಟ್, ಗರ್ಭಿಣಿಯರು ಭಾಗೇಶ್ವರ ಜಿಲ್ಲೆಯ ಗರುದ್‍ನ ಗಂಗಾ ನದಿಯ ನೀರು ಕುಡಿದರೆ ಸಿಸೇರಿಯನ್ ಹೆರಿಗೆ ಮಾಡುವುದನ್ನು ತಪ್ಪಿಸಬಹುದು ಎಂದು ಹೇಳಿದ ಕೆಲ ದಿನಗಳ ನಂತರ ಮುಖ್ಯಮಂತ್ರಿಯವರು ಹಸುವನ್ನು ಹೊಗಳಿರುವುದು ಈಗ ಭಾರೀ ಸುದ್ದಿಯಾಗಿದೆ.
ಸಿಎಂ ಅವರ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅಧಿಕಾರಿಯೊಬ್ಬರು ಮುಖ್ಯಮಂತ್ರಿಗಳು ಉತ್ತರಾಖಂಡ್‍ನಲ್ಲಿ ಇರುವ ಸಾಮಾನ್ಯ ನಂಬಿಕೆಗಳ ಬಗ್ಗೆ ಮಾತನಾಡುವ ಸಮಯದಲ್ಲಿ ಈ ರೀತಿ ಹೇಳಿದ್ದಾರೆ. ಹಸುವಿನ ಹಾಲು ಮತ್ತು ಮೂತ್ರದಲ್ಲಿ ಔಷಧೀಯ ಗುಣಗಳು ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ ಮತ್ತು ಉತ್ತರಾಖಂಡ್‍ನ ಬೆಟ್ಟದಲ್ಲಿ ವಾಸಿಸುವ ಕೆಲ ಜನರು ಹಸು ನಮಗೆ ಉಸಿರಾಡಲು ಆಮ್ಲಜನಕ ನೀಡುತ್ತದೆ ಎಂದು ನಂಬುತ್ತಾರೆ ಈ ರೀತಿಯಲ್ಲಿ ಸಿಎಂ ಅವರು ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.