ಲಕ್ನೋ: ಗೋವು ಪವಿತ್ರ.. ಗೋಮೂತ್ರ (Cow Urine) ಸೇವನೆಯಿಂದ ರೋಗರುಜಿನ ವಾಸಿಯಾಗುತ್ತದೆ. ಗೋಮೂತ್ರ ಸೇವನೆಯಿಂದ ಚರ್ಮಕ್ಕೆ ನಾನಾ ಪ್ರಯೋಜನಗಳಿವೆ ಎಂದು ನಂಬಿದ್ದ ಹಿಂದೂಪರವಾದಿಗಳಿಗೆ ಬಿಗ್ ಶಾಕ್ ನೀಡುವ ಸುದ್ದಿ ವರದಿಯಾಗಿದೆ. ಮಾನವರಿಗೆ ಗೋಮೂತ್ರ ಸೇವನೆ ಯೋಗ್ಯವಲ್ಲ ಎಂದು ಐವಿಆರ್‌ಐ ಅಧ್ಯಯನವೊಂದು ತಿಳಿಸಿದೆ. ಅಷ್ಟೇ ಅಲ್ಲ, ಗೋಮೂತ್ರಕ್ಕೆ ಹೋಲಿಸಿದರೆ ಎಮ್ಮೆಯ ಮೂತ್ರವೇ ಉತ್ತಮ ಎಂದು ವಿಶ್ಲೇಷಿಸಿದೆ.
ದಶಕಗಳಿಂದ ಪವಾಡ ಸದೃಶ ಔಷಧಿ ಎಂದು ಹೇಳಲಾಗುತ್ತಿರುವ ಗೋಮೂತ್ರವು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಹೊಂದಿದೆ. ಹೀಗಾಗಿ ಇದು ನೇರವಾಗಿ ಮಾನವ ಬಳಕೆಗೆ ಸೂಕ್ತವಲ್ಲ ಎಂದು ದೇಶದ ಪ್ರಮುಖ ಪ್ರಾಣಿ ಸಂಶೋಧನಾ ಸಂಸ್ಥೆಯಾದ ಬರೇಲಿ ಮೂಲದ ಇಂಡಿಯನ್ ವೆಟರ್ನರಿ ರಿಸರ್ಚ್ ಇನ್‌ಸ್ಟಿಟ್ಯೂಟ್ (IVRI) ಅಧ್ಯಯನದ ವರದಿ ತಿಳಿಸಿದೆ. ಇದನ್ನೂ ಓದಿ: ಜಾತ್ರೆಯಲ್ಲಿ ಕೆಂಡದ ಮೇಲೆ ನಡೆದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ
ಸಂಸ್ಥೆಯ ಭೋಜ್ ರಾಜ್ ಸಿಂಗ್ ನೇತೃತ್ವದಲ್ಲಿ ಮೂವರು ಪಿಎಚ್‌ಡಿ ವಿದ್ಯಾರ್ಥಿಗಳು ನಡೆಸಿದ ಅಧ್ಯಯನದಲ್ಲಿ, ಆರೋಗ್ಯವಂತ ಹಸುಗಳು ಮತ್ತು ಎತ್ತುಗಳ ಮೂತ್ರದ ಮಾದರಿಗಳಲ್ಲಿ ಕನಿಷ್ಠ 14 ವಿಧದ ಹಾನಿಕಾರಕ ಬ್ಯಾಕ್ಟೀರಿಯಾಗಳಿದ್ದು, ಹೊಟ್ಟೆಯ ಸೋಂಕನ್ನು ಉಂಟುಮಾಡುತ್ತವೆ ಎಂದು ಪತ್ತೆ ಹಚ್ಚಲಾಗಿದೆ. ಈ ಸಂಶೋಧನೆಯ ವರದಿಯನ್ನು ಆನ್‌ಲೈನ್ ಸಂಶೋಧನಾ ವೆಬ್‌ಸೈಟ್ ರಿಸರ್ಚ್‌ಗೇಟ್‌ನಲ್ಲಿ ಪ್ರಕಟಿಸಲಾಗಿದೆ.
ಇನ್‌ಸ್ಟಿಟ್ಯೂಟ್‌ನ ಎಪಿಡೆಮಿಯಾಲಜಿ ವಿಭಾಗದ ಮುಖ್ಯಸ್ಥ ಸಿಂಗ್, “ಹಸು, ಎಮ್ಮೆಗಳು ಮತ್ತು ಮಾನವರ ಮೂತ್ರದ 73 ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಎಮ್ಮೆಗಳ ಮೂತ್ರದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಚಟುವಟಿಕೆಯು ಹಸುಗಳಿಗಿಂತ ಹೆಚ್ಚು ಉತ್ತಮವಾಗಿದೆ. ಎಮ್ಮೆಯ ಮೂತ್ರವು ಬ್ಯಾಕ್ಟೀರಿಯಾ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ ಎಂದಿದ್ದಾರೆ. ಇದನ್ನೂ ಓದಿ: CSK ಬ್ಯಾನ್ ಮಾಡಿ: ತಮಿಳುನಾಡು ಶಾಸಕ
ನಾವು ಸ್ಥಳೀಯ ಡೈರಿ ಫಾರ್ಮ್‌ಗಳಿಂದ ಮೂರು ತಳಿಯ ಹಸುಗಳ ಮೂತ್ರದ ಮಾದರಿಗಳನ್ನು ಸಂಗ್ರಹಿಸಿದ್ದೆವು. ಎಮ್ಮೆ ಹಾಗೂ ಮನುಷ್ಯರ ಮೂತ್ರವನ್ನೂ ಸಂಗ್ರಹಿಸಿ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. 2022ರ ಜೂನ್-ನವೆಂಬರ್ ನಡುವೆ ನಡೆಸಿದ ಅಧ್ಯಯನದಲ್ಲಿ, ಆರೋಗ್ಯವಂತ ವ್ಯಕ್ತಿಗಳ ಮೂತ್ರದ ಮಾದರಿಗಳಲ್ಲೂ ಗಣನೀಯ ಪ್ರಮಾಣದಲ್ಲಿ ರೋಗಕಾರಕ ಬ್ಯಾಕ್ಟೀರಿಯಾ ಇರುವುದು ಕಂಡುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಗೋಮೂತ್ರವನ್ನು ಮಾನವ ಬಳಕೆಗೆ ಶಿಫಾರಸು ಮಾಡಲಾಗುವುದಿಲ್ಲ. ಬಟ್ಟಿ ಇಳಿಸಿದ ಮೂತ್ರದಲ್ಲಿ ಸಾಂಕ್ರಾಮಿಕ ಬ್ಯಾಕ್ಟೀರಿಯಾ ಇರುವುದಿಲ್ಲ ಎಂದು ಕೆಲವರು ವಾದ ಮಂಡಿಸುತ್ತಾರೆ. ಅದರ ಬಗ್ಗೆ ನಾವು ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಡಿವೋರ್ಸ್‍ನ್ನು ಫೋಟೋಶೂಟ್ ಮಾಡಿಸಿ ಸೆಲೆಬ್ರೆಟ್ ಮಾಡಿದ ಮಹಿಳೆ