ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಜಾನುವಾರಗಳ ಮೇಲೆ ಹುಲಿಗಳ ದಾಳಿ ಮಿತಿಮೀರಿದ್ದು, ನಿರಂತರ ದಾಳಿ ನಡೆಯುತ್ತಿದೆ. ಇಂದು ಕೂಡ ವಿರಾಜಪೇಟೆ ತಾಲೂಕಿನ ಕುಮಟೂರಿನಲ್ಲಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ತಿಂದು ಹಾಕಿದೆ.
ಕುಮಟೂರು ಗ್ರಾಮದ ಕಳ್ಳಂಗಡ ಕೌಶಿಕ್ ರಮೇಶ್ ಅವರು ಇಂದು ಬೆಳಗ್ಗೆ ಮರಕ್ಕೆ ಕಟ್ಟಿದ ಸುಮಾರು 60 ಸಾವಿರ ರೂ. ಮೌಲ್ಯದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಈ ಸಂಬಂಧ ಹಸುವಿನ ಮಾಲೀಕ ಕೌಶಿಕ್ ಅವರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಅವರಿಗೆ ಮಾಹಿತಿ ನೀಡಿದರು. ತಕ್ಷಣ ಘಟನೆಯನ್ನು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಗಮನಕ್ಕೆ ತರಲಾಯಿತು.
Advertisement
Advertisement
ಹುಲಿ ದಾಳಿ ನಡೆದ ಕುಮಟೂರು ಗ್ರಾಮವು ಪೊನ್ನಂಪೇಟೆ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಅಲ್ಲಿನ ವಲಯ ಅರಣ್ಯಾಧಿಕಾರಿ ತೀರ್ಥ ಅವರಿಗೆ ಫೋನ್ ಮಾಡಿ, ಕೂಡಲೇ ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಮೊತ್ತವನ್ನು ನೀಡುವಂತೆ ಮನವಿ ಮಾಡಲಾಗಿದೆ.
Advertisement
ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಹುಲಿಗಳು ಬರೋಬ್ಬರಿ 10ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದು ತಿಂದುಹಾಕಿವೆ. ಹೀಗೆ ನಿರಂತರವಾಗಿ ಹುಲಿದಾಳಿ ನಡೆಯುತ್ತಿರುವುದರಿಂದ ಅರಣ್ಯ ಪ್ರದೇಶ ಸಮೀಪದ ಗ್ರಾಮಗಳ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.