Connect with us

Latest

ಗೋಕಳ್ಳರ ಬಾಂಬ್ ದಾಳಿಗೆ ಕೈ ಕಳೆದುಕೊಂಡ ಯೋಧ

Published

on

ಕೊಲ್ಕತ್ತಾ: ಬಾಂಗ್ಲಾ ಮೂಲದ ಗೋವು ಕಳ್ಳರ ಗುಂಪೊಂದು ನಡೆಸಿದ ಬಾಂಬ್ ದಾಳಿಗೆ ಬಿಎಸ್‍ಎಫ್ ಯೋಧರೊಬ್ಬರು ತಮ್ಮ ಕೈ ಕಳೆದುಕೊಂಡ ಘಟನೆ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನಡೆದಿದೆ.

ಉತ್ತರ 24 ಪರಗಣ ಜಿಲ್ಲೆಯಲ್ಲಿ ಅಂಗ್ರೇಲ್ ಗಡಿಯ ಭಾಗದಲ್ಲಿ ಈ ಘಟನೆ ನಡೆದಿದೆ. ಗುರುವಾರ ನಸುಕಿನ ಜಾವ 3.30ರ ಹೊತ್ತಿಗೆ ಅಂಗ್ರೇಲ್ ಗಡಿಯ ಪೋಸ್ಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಸ್‍ಎಫ್ ಪೇದೆ ಅನಿಸುರ್ ರೆಹಮಾನ್ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ.

ಗಡಿಯಿಂದ ಕೇವಲ 200 ಮೀ. ದೂರದಲ್ಲಿ ಗೋವು ಕಳ್ಳರು ಅಕ್ರಮವಾಗಿ ನುಸುಳುತ್ತಿರುವುದನ್ನ ಯೋಧ ಗಮನಿಸಿದ್ದಾರೆ. ಆಗ ತಕ್ಷಣ ಸ್ಥಳಕ್ಕೆ ಬಂದು ನೋಡಿದಾಗ 25ಕ್ಕೂ ಹೆಚ್ಚು ಬಾಂಗ್ಲಾದೇಶಿ ಗೋಕಳ್ಳರು ಗಡಿಯೊಳಗೆ ನುಗ್ಗಿ ಗೋವುಗಳನ್ನು ಎಳೆದುಕೊಂದು ಹೋಗುತ್ತಿದ್ದುದನ್ನು ನೋಡಿದ್ದಾರೆ. ಅವರೊಂದಿಗೆ ಸ್ಥಳೀಯರು ಗೋವು ಕಳ್ಳರಿಗೆ ಸಾಥ್ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಅವರನ್ನು ತಡೆಯಲು ಹೋದ ಯೋಧರ ಮೇಲೆ ಹಲ್ಲೆ ನಡೆಸಿ, ಬಾಂಬ್ ದಾಳಿ ಮಾಡಿದ್ದಾರೆ.

ಯೋಧ ರೆಹಮಾನ್ ಅವರನ್ನು ಕಂಡ ಕೂಡಲೇ ಅವರನ್ನು ಸುತ್ತುವರಿದ ಗೋವುಕಳ್ಳರು ಹಾಗೂ ಸ್ಥಳೀಯರು ಮೊದಲು ಅವರನ್ನು ಮನಬಂದಂತೆ ಥಳಿಸಿದ್ದಾರೆ. ನಂತರ ಎರಡು ಕಚ್ಚಾ ಬಾಂಬ್‍ಗಳನ್ನು ಎಸೆದು ಎಸ್ಕೇಪ್ ಆಗಿದ್ದಾರೆ. ಇದೇ ವೇಳೆ ಆತ್ಮರಕ್ಷಣೆಗಾಗಿ ಯೋಧ ಕೂಡ ಗುಂಡಿನ ಪ್ರತಿದಾಳಿ ನಡೆಸಿದ್ದಾರೆ.

ಬಾಂಬ್ ದಾಳಿಯಿಂದ ರೆಹಮಾನ್ ಅವರ ಶ್ವಾಸಕೋಶ ಹಾಗೂ ಹೊಟ್ಟೆಯ ಭಾಗಕ್ಕೆ ತೀವ್ರವಾಗಿ ಪೆಟ್ಟು ಬಿದ್ದಿದ್ದು, ಬಲಗೈ ಸಂಪೂರ್ಣ ತುಂಡಾಗಿದೆ. ಅಲ್ಲದೆ ಯೋಧರ ಪ್ರತಿದಾಳಿಗೆ ಕೆಲ ಗೋವು ಕಳ್ಳರು ಕೂಡ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಗಾಯಗೊಂಡಿರುವ ರೆಹಮಾನ್ ಅವರು ಬನ್‍ಗಾಂವ್‍ನಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ದಾಳಿ ನಡೆದ ವೇಳೆ ಇತರೆ ಯೋಧರು ಸ್ಥಳಕ್ಕೆ ಬರುವಷ್ಟರಲ್ಲಿ ಗೋವು ಕಳ್ಳಲು ಪರಾರಿಯಾಗಿದ್ದರು. ಆ ಸಮಯದಲ್ಲಿ ಕತ್ತಲಿದ್ದ ಕಾರಣಕ್ಕೆ ಅವರನ್ನು ನಾವು ಹಿಡಿಯಲು ಸಾಧ್ಯವಾಗಿಲ್ಲ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಧವಾರದಂದು ಮುರ್ಶಿದಾಬಾದ್ ಜಿಲ್ಲೆಯ ಬಾಂಗ್ಲಾ ಗಡಿಯಲ್ಲಿ 200 ಬಾಂಗ್ಲಾ ಮೂಲದ ಗೋವು ಕಳ್ಳರ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ವೇಳೆ ಅವರ ಮೇಲೆ ಬಿಎಸ್‍ಎಫ್ ಪಡೆ ದಾಳಿ ನಡೆಸಿತ್ತು. ಆಗ ಅವರ ಬಳಿ ಇದ್ದ 107 ಎಮ್ಮೆಗಳನ್ನು ವಶಕ್ಕೆ ಪಡೆದಿತ್ತು.

Click to comment

Leave a Reply

Your email address will not be published. Required fields are marked *