ರಾಮನಗರ: ಜಾನುವಾರುಗಳಿಗೆ ಮೇವು ಒದಗಿಸಲೆಂದು ಕಾಟಾಚಾರಕ್ಕೆ ಜಿಲ್ಲಾಡಳಿತ ಗೋಶಾಲೆ ನಿರ್ಮಾಣ ಮಾಡಿತ್ತು. ಆದ್ರೆ ಗೋಶಾಲೆ ಇದ್ದಷ್ಟು ದಿನ ಗೋವುಗಳಿಗೆ ಸರಿಯಾಗಿ ಮೇವು ಒದಗಿಸುತ್ತಿರಲಿಲ್ಲ. ಕೊನೆಗೆ 15 ದಿನಗಳ ಕಾಲ ಗೋವುಗಳಿಗೆ ಮೇವು ನೀಡದ ಜಿಲ್ಲಾಡಳಿತ ಗೋವುಗಳನ್ನು ರೈತರಿಗೆ ವಾಪಾಸ್ಸು ಕಳುಹಿಸಿದೆ.
Advertisement
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಮರಳವಾಡಿ ಗ್ರಾಮದ ಅನ್ನಪೂರ್ಣೇಶ್ವರಿ ದೇವಾಲಯದ ಸಮೀಪ ಜಿಲ್ಲಾಡಳಿತದಿಂದ ಗೋಶಾಲೆ ತೆರೆಯಲಾಗಿತ್ತು. ಆದ್ರೆ ಗೋಶಾಲೆ ನಿರ್ಮಾಣವಾದ ಬಳಿಕ ಸಕಲ ಸವಲತ್ತು ನೀಡಬೇಕಾದ ಅಧಿಕಾರಿಗಳು ಸರಿಯಾಗಿ ಇತ್ತ ಸುಳಿಯಲಿಲ್ಲ. ಇದ್ದಷ್ಟು ದಿನ ಮೇವನ್ನೂ ಸಹ ಪೂರೈಸಿಲ್ಲ. ಜಾನುವಾರುಗಳಿಗೆ ಮೇವು ಕಳುಹಿಸಿ ಅಂತಾ ಫೋನ್ ಮಾಡಿದ್ರೆ ಅಧಿಕಾರಿಗಳೇ ಗರಂ ಆಗಿ ರೈತರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ರೈತರು ಹೇಳುತ್ತಾರೆ.
Advertisement
Advertisement
ಕಳೆದ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯ ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳು ಬರ ಪರಿಶೀಲನೆಗಾಗಿ ಭೇಟಿ ನೀಡಿದ್ದಾಗ ಈ ಗೋಶಾಲೆಯನ್ನು ತೆರೆಯಲಾಗಿತ್ತು. ಕಾನೂನು ಸಚಿವ ಟಿ.ಬಿ ಜಯಚಂದ್ರ ಬರಪರಿಹಾರ ಪರಿಶೀಲನೆ ಪ್ರವಾಸದ ವೇಳೆ ಈ ಗೋಶಾಲೆಯನ್ನು ಉದ್ಘಾಟಿಸಿದ್ರು. ಆದ್ರೆ ಮೊದಲು ಗೋಶಾಲೆಯನ್ನು ದೇವಾಲಯದ ಆವರಣದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆಸಲಾಗಿತ್ತು.
Advertisement
ಆದರೆ ಅಧಿಕಾರಿಗಳೇ ದೇವಾಲಯದ ಆವರಣದಿಂದ ಹೊರಗೆ ಬರುವಂತೆ ರೈತರಿಗೆ ಸೂಚನೆ ಸಹ ನೀಡಿ ಕೇವಲ 30 ಜಾನುವಾರುಗಳಿಗೆ ಸಾಕಾಗುಷ್ಟು ಗೋಶಾಲೆ ನಿರ್ಮಾಣ ಮಾಡಿದ್ರು. ಆದ್ರೆ ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಸತತ 15 ದಿನಗಳ ಕಾಲ ಮೇವನ್ನೇ ಒದಗಿಸಿಲ್ಲ. ಕೊನೆಗೆ ಗೋಶಾಲೆಯನ್ನೇ ಮುಚ್ಚಿದ್ದಾರೆ. ಇದೀಗ ಬರಗಾಲವಿದ್ದು ಮತ್ತೆ ಗೋಶಾಲೆ ತೆರೆಯಿರಿ ಎಂದು ರೈತರು ಆಗ್ರಹಿಸಿದ್ದಾರೆ.
ಒಟ್ಟಾರೆ ಕಾಟಾಚಾರಕ್ಕೆ ಕೆಲಸ ಮಾಡೋ ಅಧಿಕಾರಿಗಳು ನಮಗೆ ಬೇಕಿಲ್ಲ ಅನ್ನೋದು ರೈತರ ಆಕ್ರೋಶವಾಗಿದೆ. ಜೊತೆಗೆ ಕಾಟಾಚಾರಕ್ಕೆ ಗೋಶಾಲೆ ತೆರೆದು ರೈತರು ಹಾಗೂ ಜಾನುವಾರುಗಳಿಗೆ ಮೋಸ ಮಾಡಿದ ಜಿಲ್ಲಾಡಳಿತದ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.