ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಹಿರೇ ಪೇಟೆಯಲ್ಲಿ ಆಕಳ ಕರುವೊಂದು ಅಸ್ವಸ್ಥಗೊಂಡು ರಸ್ತೆಯಲ್ಲಿಯೇ ಅಸುನಿಗಿತ್ತು. ಕರುಳಿನ ಕುಡಿಯನ್ನು ಕಳೆದುಕೊಂಡ ಹಸುವಿನ ಮೂಕರೋಧನೆ ನೆರೆದಿದ್ದವರ ಕರುಳು ಹಿಂಡುವಂತೆ ಮಾಡಿತ್ತು.
ಕರುಳ ಕುಡಿಯನ್ನು ಕಳೆದುಕೊಂಡ ಹಸು ರೊಚ್ಚಿಗೆದ್ದು ರಸ್ತೆ ತುಂಬೆಲ್ಲಾ ಓಡಾಡಿ ಜನರಲ್ಲಿ ಕೆಲ ಸಮಯ ಆತಂಕಕ್ಕೀಡು ಮಾಡಿತ್ತು. ತನ್ನ ಕರುವನ್ನು ಯಾರೋ ಏನೋ ಮಾಡಿದ್ದಾರೆ ಎನ್ನುವ ಸಿಟ್ಟಿನಿಂದ ಆಕಳು ಜನರ ಮೇಲೆ ಎರಗಿತ್ತು. ಹಸುವಿನ ಈ ರೋಧನೆಯ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ರಸ್ತೆಯಲ್ಲಿ ನಡೆದು ಬರುತ್ತಿದ್ದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಶೇರೆವಾಡ ಗ್ರಾಮದ ಓರ್ವ ಯುವಕನನ್ನು ಆಕಳು ರಸ್ತೆ ಮೇಲೆ ಕೆಡವಿ ಥಳಿಸಿತು. ಕೂಡಲೇ ಅಲ್ಲಿದ್ದ ಜನರು ಹರಸಾಹಸಪಟ್ಟು ಆತನನ್ನು ಬದುಕಿಸಿದ್ದಾರೆ. ನಂತರ ಸ್ಥಳೀಯರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ವಿಷಯ ಮುಟ್ಟಿಸಿದರು.
Advertisement
ಸ್ಥಳಕ್ಕೆ ಆಗಮಿಸಿದ ಪಾಲಿಕೆಯ ಸಿಬ್ಬಂದಿ ಸಾವನ್ನಪ್ಪಿದ್ದ ಕರುವನ್ನು ತೆಗೆದುಕೊಂಡು ಹೋದರು. ಆದರೂ ಸಹ ಕರು ಮೃತಪಟ್ಟ ಸ್ಥಳದಲ್ಲಿಯೇ ಹಸು ಒಂದು ಗಂಟೆಗೂ ಹೆಚ್ಚು ಕಾಲ ಅಲ್ಲಿಯೇ ತಿರುಗಾಡುತ್ತಿದ್ದನ್ನು ನೋಡಿದ ಜನರ ಕಣ್ಣಾಲಿಗಳು ಅವರಿಗರಿವಿಲ್ಲದಂತೆ ಒದ್ದೆಯಾಗಿದ್ದವು.
Advertisement
https://www.youtube.com/watch?v=BnJTXkI_mnA&feature=youtu.be
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv