ದಾವಣಗೆರೆ/ಬೆಂಗಳೂರು: ಜಿಲ್ಲೆಯಲ್ಲಿ ಮತ್ತೆ ಕಾಡಾನೆಗಳ ದಾಳಿ ಮುಂದುವರೆದಿದೆ. ಹೊನ್ನಾಳಿ ತಾಲೂಕು ವ್ಯಾಪ್ತಿಯಲ್ಲಿ ಬೆಳಗಿನ ಜಾವದಿಂದ ಕಾಡಾನೆಗಳು ದಾಂಧಲೆ ನಡೆಸಿದ್ದು, ಹೊನ್ನಾಳಿ ಸಮೀಪ ಹಸುಗಳನ್ನ ತಿವಿದು ಗಾಯಗೊಳಿಸಿವೆ.
ದೇವರಹೊನ್ನಾಳಿಯಲ್ಲಿ ಗ್ರಾಮದಲ್ಲಿ ಕಾಡಾನೆಗಳು ಎರಡು ಹಸುಗಳಿಗೆ ತೀವ್ರವಾಗಿ ಇರಿದಿವೆ. ಇದರಿಂದ ಹಸುವಿನ ಕರುಳು ಹೊರಬಂದಿದ್ದು, ಒದ್ದಾಡುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಕಾಡಾನೆ ದಾಳಿಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೇವರಹೊನ್ನಾಳಿ ಗ್ರಾಮದ ಭರಮಪ್ಪ, ಬೆನಕನಹಳ್ಳಿ ಗ್ರಾಮದ ಮಳಲಿ ರಾಜಪ್ಪ ಎಂಬವರಿಗೆ ಗಂಭೀರ ಗಾಯಗಳಾಗಿವೆ.
ಗಾಯಾಳುಗಳನ್ನ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ಹೊನ್ನಾಳಿ ತಾಲೂಕಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸುಗ್ಗಿ ಕಾಲ ಬಂತೆಂದರೆ ಸಾಕು ಅರಣ್ಯದಂಚಿನ ಪ್ರದೇಶಗಳಲ್ಲಿ ಕಾಡಾನೆಗಳ ಗುಂಪು ಪ್ರತ್ಯಕ್ಷವಾಗುತ್ತವೆ. ಇಂದು ಮುಂಜಾನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ತಳಿ, ಡೆಂಕಣಿಕೋಟೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದ 30 ಆನೆಗಳು ಗುಂಪು ಕರ್ನಾಟಕ ಗಡಿ ಪ್ರದೇಶವಾದ ಆನೇಕಲ್ ತಾಲೂಕಿನ ಮುತ್ಯಾಲಮಡುವು ಅರಣ್ಯ ಪ್ರದೇಶದತ್ತ ಮುಖ ಮಾಡಿವೆ. ಈ ಕಾಡಾನೆಗಳು ಇಷ್ಟು ದಿನ ಡೆಂಕಣಿಕೋಟೆ ಗ್ರಾಮದ ಸುತ್ತ ಮುತ್ತ ಹಾವಳಿ ನೀಡಿ, ಬೆಳೆಹಾನಿ ಮಾಡಿ ರೈತರಲ್ಲಿ ಅತಂಕ ಮೂಡಿಸಿದ್ದವು.
ಆನೆಗಳ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ತಮಿಳುನಾಡು ಅರಣ್ಯ ಸಿಬ್ಬಂದಿ ಆನೆಗಳನ್ನು ಕರ್ನಾಟಕದತ್ತ ಒಡಿಸಿದ್ದು ಸದ್ಯ ಮುತ್ಯಾಲಮಡುವು ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಗುಂಪು ಬೀಡು ಬಿಟ್ಟಿವೆ. ಇದರಲ್ಲಿ ಮರಿ ಆನೆಗಳು ಇರಿವುದು ವಿಶೇಷವಾಗಿದೆ.