– ಐಸಿಎಂಆರ್ ಕೊಟ್ಟ ಸ್ಪಷ್ಟನೆ ಏನು..?
ವಿಶ್ವಾದ್ಯಂತ ಮಹಾಮಾರಿ ಕೊರೊನಾ ವೈರಸ್ (Corona Virus) ಜನರನ್ನು ದಂಗುಬಡಿಸಿತ್ತು. ಸಾವಿರಾರು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡರೆ ಇನ್ನೂ ಕೆಲವರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತ್ತು. ಈ ನಡುವೆ ಕೊರೊನಾವನ್ನು ಹೊಡೆದೋಡಿಸಲು ಚಿಕಿತ್ಸೆಯನ್ನು ಕಂಡುಹಿಡಿಯಲಾಯಿತು. ಅಂತೆಯೇ ಮಹಾಮಾರಿಗೆ ಭಯ ಬಿದ್ದು ಎಲ್ಲರೂ ಕೋವಿಶೀಲ್ಡ್ (Covishield) ಹಾಗೂ ಕೋವ್ಯಾಕ್ಸಿನ್ ಮೊರೆ ಹೋದರು.
ಹೌದು. ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿತು. ಭಾರತ ದೇಶದಲ್ಲಿ ಈ ಲಸಿಕೆ ವ್ಯಾಪಕವಾಗಿ ನಿರ್ವಹಿಸಲ್ಪಟ್ಟಿತು. ಅಲ್ಲದೇ ಪ್ರಪಂಚದಾದ್ಯಂತ ದೇಶಗಳು ತಮ್ಮ ನಾಗರಿಕರಿಗೆ ಈ ಲಸಿಕೆಯನ್ನು ನೀಡುವುದನ್ನು ಮುಂದುವರಿಸಿದವು. ಈ ಮಧ್ಯೆ ಅಪರೂಪದ ಅಡ್ಡಪರಿಣಾಮಗಳ ವರದಿಗಳು ಹೊರಹೊಮ್ಮಿವೆ. ಇದನ್ನು ಟಿಟಿಎಸ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಹಾಗಿದ್ರೆ ಏನಿದು ಟಿಟಿಎಸ್..?, ಇದರ ಲಕ್ಷಣಗಳು ಏನೇನು ಎಂಬುದನ್ನು ನೋಡೋಣ. ಜೊತೆಗೆ ಅಡ್ಡಪರಿಣಾಮದ ವಿಚಾರ ಹೊರ ಬೀಳುತ್ತಿದ್ದಂತೆಯೇ ಐಸಿಎಂಆರ್ ಸ್ಪಷ್ಟನೆ ಕೂಡ ಕೊಟ್ಟಿದೆ.
Advertisement
Advertisement
ಏನಿದು TTS ಸಿಂಡ್ರೋಮ್?
ಟಿಟಿಎಸ್ ಅಂದ್ರೆ ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್. ರಕ್ತ ಹೆಪ್ಪುಗಟ್ಟುವುದಕ್ಕೆ ಥ್ರಂಬೋಸಿಸ್ ಅಂತಾ ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುವುದಕ್ಕೆ ಥ್ರಂಬೋಸೈಟೋಪೆನಿಯಾ ಅಂತಲೂ ಕರೆಯಲಾಗುತ್ತದೆ. ಒಟ್ಟಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ಪ್ಲೇಟ್‌ಲೆಟ್‌ಗಳು (ಪ್ರತಿ ಮೈಕ್ರೋಲೀಟರ್‌ಗೆ 1,50,000 ಕ್ಕಿಂತ ಕಡಿಮೆ) ಕಡಿಮೆಯಾಗುವುದಕ್ಕೆ TTS ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.
Advertisement
TTS ಸಿಂಡ್ರೋಮ್, ಲಸಿಕೆ-ಪ್ರೇರಿತ ಇಮ್ಯೂನ್ ಥ್ರಂಬೋಟಿಕ್ ಥ್ರಂಬೋಸೈಟೋಪೆನಿಯಾ (VITT) ಎಂದೂ ಕರೆಯಲ್ಪಡುವ ಅಪರೂಪದ ರಕ್ತ ಹೆಪ್ಪುಗಟ್ಟುವಿಕೆಯಾಗಿದ್ದು, ಇದು ಕೋವಿಶೀಲ್ಡ್ ಲಸಿಕೆಗೆ ಸಂಬಂಧಿಸಿದೆ. ಇದು ಒಂದು ರೀತಿಯ ಸೆರೆಬ್ರಲ್ ವೆನಸ್ ಸೈನಸ್ ಥ್ರಂಬೋಸಿಸ್ (ಸಿವಿಎಸ್‌ಟಿ) ಆಗಿದ್ದು, ಮೆದುಳಿನ ಸೈನಸ್‌ಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ರೂಪುಗೊಳ್ಳುತ್ತದೆ. ಮೆದುಳಿನಿಂದ ರಕ್ತವು ಹೊರಹೋಗುವುದನ್ನು ತಡೆಯುತ್ತದೆ. ಇದು ಪ್ಲೇಟ್ಲೆಟ್ ಇಳಿಕೆಗೆ ಕಾರಣವಾಗುತ್ತದೆ ಮತ್ತು ದೇಹದ ವಿವಿಧ ಭಾಗಗಳಲ್ಲಿ ರಕ್ತಸ್ರಾವ ಅಥವಾ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು.
Advertisement
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, TTS ಸಿಂಡ್ರೋಮ್ ಗಂಭೀರ ಮತ್ತು ಅಪರೂಪದ ಪ್ರತಿಕೂಲ ಘಟನೆಯಾಗಿದ್ದು, ಕೋವಿಶೀಲ್ಡ್ ಲಸಿಕೆಯನ್ನು ಪಡೆದ ಕಡಿಮೆ ಸಂಖ್ಯೆಯ ಜನರಲ್ಲಿ ವರದಿಯಾಗಿದೆ. ಈ ಸ್ಥಿತಿಯು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ವರದಿಯಾಗಿದೆ. ಆದಾಗ್ಯೂ ಲಸಿಕೆಯನ್ನು ಪಡೆಯುವ ಪ್ರಯೋಜನಗಳು TTS ಸಿಂಡ್ರೋಮ್‌ಗೆ ಸಂಬಂಧಿಸಿದ ಅಪಾಯಗಳನ್ನು ಮೀರಿಸುತ್ತದೆ.
ಕಾರಣಗಳೇನು..?
TTS ಸಿಂಡ್ರೋಮ್ ಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ಬಳಿಕ ಉಂಟಾದ ಪ್ರತಿಕ್ರಿಯೆಯಿಂದ ಇದೂ ಒಂದು ಕಾರಣ ಎಂದು ನಂಬಲಾಗಿದೆ. ಲಸಿಕೆ ದೇಹವನ್ನು ಪ್ರವೇಶಿಸಿದಾಗ, ಕೊರೊನಾ ವೈರಸ್ ಮೇಲ್ಮೈಯಲ್ಲಿ ಕಂಡುಬರುವ ಸ್ಪೈಕ್ ಪ್ರೋಟೀನ್ ವಿರುದ್ಧ ಪ್ರತಿಕಾಯಗಳನ್ನು ಉತ್ಪಾದಿಸಲು ಇದು ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ಕೆಲವು ವ್ಯಕ್ತಿಗಳ ದೇಹದಲ್ಲಿ ಇದು ಬೇಗನೇ ಸಕ್ರಿಯವಾಗಬಹುದು ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ರಚನೆಗೆ ಕಾರಣವಾಗಬಹುದು.
ಟಿಟಿಎಸ್ ಸಿಂಡ್ರೋಮ್‌ನ ಲಕ್ಷಣಗಳು:
* ತೀವ್ರ ಮತ್ತು ನಿರಂತರ ತಲೆನೋವು
* ಮಂದ ದೃಷ್ಟಿ
* ಉಸಿರಾಟದ ತೊಂದರೆ
* ಎದೆ ನೋವು
* ತೀವ್ರ ಹೊಟ್ಟೆ ನೋವು
* ತೋಳುಗಳು ಅಥವಾ ಕಾಲುಗಳಲ್ಲಿ ದೌರ್ಬಲ್ಯ ಅಥವಾ ಮರಗಟ್ಟುವಿಕೆ
* ರೋಗಗ್ರಸ್ತವಾಗುವಿಕೆ
ಟಿಟಿಎಸ್ ಸಿಂಡ್ರೋಮ್‌ಗೆ ಚಿಕಿತ್ಸೆ: ಟಿಟಿಎಸ್ ಚಿಕಿತ್ಸೆಯು ಬಹು ಹಂತದ ಚಿಕಿತ್ಸೆಯಾಗಿದೆ. ಆಸ್ಪತ್ರೆಗೆ ದಾಖಲೀಕರಣದಿಂದ ಹೆಪ್ಪುಗಟ್ಟುವಿಕೆ ಚಿಕಿತ್ಸೆ ಮೂಲಕ ಭವಿಷ್ಯದಲ್ಲಿ ಉಂಟಾಗುವ ರಕ್ತ ಹೆಪ್ಪುಗಟ್ಟುವಿಕೆ ತಪ್ಪಿಸಬಹುದು. ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್ (ಐವಿಐಜಿ) ಮತ್ತು ಪ್ಲಾಸ್ಮಾ ಬದಲಾವಣೆ ಮೂಲಕ ಪ್ಲೆಟ್ಲೇಟ್ ಮಟ್ಟವನ್ನು ಸ್ಥಿರಗೊಳಿಸಬಹುದು.
ICMR ಸ್ಪಷ್ಟನೆ: ಅಡ್ಡಪರಿಣಾಮದ ವಿಚಾರ ಹೊರಬೀಳುತ್ತಿದ್ದಂತೆಯೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸ್ಪಷ್ಟನೆಯನ್ನು ನೀಡಿದೆ. ಕೊರೊನಾ ಲಸಿಕೆ ಕೋವಿಶೀಲ್ಡ್ ಅನ್ನು ಸ್ವೀಕರಿಸುವ 10 ಲಕ್ಷ ಜನರಲ್ಲಿ ಏಳರಿಂದ ಎಂಟು ವ್ಯಕ್ತಿಗಳಲ್ಲಿ ಮಾತ್ರ TTS ಎಂದು ಕರೆಯಲ್ಪಡುವ ಅಪರೂಪದ ಅಡ್ಡ ಪರಿಣಾಮ ಉಂಟಾಗಲಿದೆ. ಮೊದಲ ಡೋಸ್ ಪಡೆದಾಗ ಅಪಾಯವು ಅತ್ಯಧಿಕವಾಗಿರಲಿದೆ. ಆದರೆ ಅದು ಎರಡನೇ ಡೋಸ್‌ಗೆ ಕಡಿಮೆಯಾಗುತ್ತದೆ. ಮೂರನೇ ಡೋಸ್‌ಗೆ ಈ ಅಪಾಯ ಇನ್ನೂ ಕಡಿಮೆಯಾಗಲಿದೆ. ಒಂದು ವೇಳೆ ಅಡ್ಡ ಪರಿಣಾಮ ಸಂಭವಿಸಿದ್ದಲ್ಲಿ ಆರಂಭಿಕ ಎರಡರಿಂದ ಮೂರು ತಿಂಗಳೊಳಗೆ ಕಾಣಿಸಿಕೊಳ್ಳುತ್ತದೆ ಎಂದು ಭಾರತದ ಉನ್ನತ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ನಿವೃತ್ತ ICMR ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಹೇಳಿದ್ದಾರೆ.