– ಮೇ 17ರವರೆಗೆ ಲಾಕ್‍ಡೌನ್ ಮುಂದುವರಿಕೆ
– ಮದ್ಯ, ಮದುವೆಗೆ ಷರತ್ತುಬದ್ಧ ಅನುಮತಿ
ನವದೆಹಲಿ: ಎಲ್ಲರ ನಿರೀಕ್ಷೆಗಳನ್ನು ಹುಸಿಯಾಗಿಸದಂತೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದೆ. ಲಾಕ್‍ಡೌನ್ ಮುಗಿಯಲು ಇನ್ನೆರಡೇ ದಿನ ಬಾಕಿ ಇರುವಾಗಲೇ ಕೇಂದ್ರ ಸರ್ಕಾರ ಮೂರನೇ ಬಾರಿಗೆ ಲಾಕ್‍ಡೌನ್ ವಿಸ್ತರಿಸಿದೆ. ಆದ್ರೆ, ಲಾಕ್‍ಡೌನ್ ವ್ಯಾಪ್ತಿ ಮತ್ತು ಸ್ವರೂಪದಲ್ಲಿ ಅಮುಲಾಗ್ರ ಬದಲಾವಣೆಗಳು ಆಗಿವೆ.
ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲೆಂದು ಮೇ 4ರಿಂದ ಲಾಕ್‍ಡೌನ್ ಭಾಗ 3 ಜಾರಿಗೆ ಬರಲಿದ್ದು, ಮೇ 17ರವರೆಗೆ ಇರಲಿದೆ. ಕೊರೊನಾ ತೀವ್ರತೆ ಆಧಾರದ ಮೇಲೆ ದೇಶವನ್ನು ಮೂರು ಝೋನ್‍ಗಳಾಗಿ ವಿಂಗಡಿಸಿದ್ದು, ಒಂದೊಂದು ಝೋನ್‍ಗೂ ಪ್ರತ್ಯೇಕವಾದ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ.
Advertisement
Advertisement
ರೆಡ್ ಝೋನ್ ಹೊರತುಪಡಿಸಿ ಉಳಿದ 2 ಕಡೆ ಬಿಗ್ ರಿಲೀಫ್ ನೀಡಿದೆ. ಮೇ 3ರ ಬಳಿಕ ಯಾವ ಸ್ವರೂಪದ ಲಾಕ್‍ಡೌನ್ ಇರಬೇಕು ಎಂಬುದನ್ನು ನಿರ್ಧರಿಸಲು ಪ್ರಧಾನಿ ಮೋದಿ, ಇಂದು ಉನ್ನತ ಮಟ್ಟದ ಸಭೆ ನಡೆಸಿ ಚರ್ಚೆ ನಡೆಸಿದರು. ಸಚಿವರಾದ ಅಮಿತ್ ಷಾ, ಪಿಯೂಶ್ ಗೋಯೆಲ್, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಜೊತೆ ಮೋದಿ ಮಂತ್ರಾಲೋಚನೆ ನಡೆಸಿದರು. ಬಳಿಕ ಎರಡು ವಾರಗಳ ಕಾಲ ಲಾಕ್‍ಡೌನ್ ವಿಸ್ತರಿಸಲು ತೀರ್ಮಾನ ಕೈಗೊಂಡರು.
Advertisement
ಕೇಂದ್ರದ ಮಾರ್ಗಸೂಚಿಗಳನ್ನು ಹೊರತುಪಡಿಸಿ ಲಾಕ್‍ಡೌನ್ ವಿಸ್ತರಿಸಲು/ವಿನಾಯ್ತಿ ನೀಡಲು ರಾಜ್ಯ ಸರ್ಕಾರಗಳಿಗೆ ಮೋದಿ ಸರ್ಕಾರ ಅಧಿಕಾರ ನೀಡಿದೆ. ಭಾನುವಾರ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ. ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಮದ್ಯ, ಸಲೂನ್ ಶಾಪ್ ತೆರೆಯಲು ಅನುಮತಿ ಸಿಕ್ಕಿದೆ.
Advertisement
ಮೇ 3ರ ಬಳಿಕ ದೇಶದಲ್ಲಿ ಏನಿರುತ್ತೆ ಏನಿರಲ್ಲ?
> ವಿಮಾನ, ರೈಲು, ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ಇಲ್ಲ.
> ಅಂತರ್ ರಾಜ್ಯಗಳ ನಡುವೆ ಸಂಚಾರ ಇಲ್ಲ (ಅಗತ್ಯ ಸೇವೆ ಹೊರತುಪಡಿಸಿ)
> ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು ಇರಲ್ಲ
> ಹೋಟೆಲ್, ರೆಸ್ಟೋರೆಂಟ್ ಇರಲ್ಲ (ಹೋಟೆಲ್‍ನಲ್ಲಿ ಪಾರ್ಸೆಲ್‍ಗಷ್ಟೇ ಅವಕಾಶ)
> ಥಿಯೇಟರ್, ಜಿಮ್‍ಗೆ ಅವಕಾಶ ಇಲ್ಲ
> ರಾತ್ರಿ 7 ರಿಂದ ಬೆಳಗ್ಗೆ 7 ಗಂಟೆವರೆಗೆ ಜನ ಓಡಾಡುವಂತಿಲ್ಲ
> 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ಮಕ್ಕಳು ಮನೆಯಲ್ಲೇ ಇರಬೇಕು
> ಮದುವೆ ಮತ್ತು ಶುಭ ಸಮಾರಂಭಗಳಿಗೆ ಅವಕಾಶ (ಗರಿಷ್ಠ 50 ಪಾಲ್ಗೊಳ್ಳಬಹುದು)
ಕೆಂಪು ವಲಯದಲ್ಲಿರುವ 130 ಜಿಲ್ಲೆಗಳಲ್ಲಿ ಏನಿರುತ್ತೆ?
> ಕಂಟೈನ್‍ಮೆಂಟ್ ಝೋನ್‍ನಲ್ಲಿ ಯಾವುದೇ ಚಟುವಟಿಕೆ ಇಲ್ಲ
> ಕೈಗಾರಿಕೆಗಳಿಗೆ ಷರತ್ತುಬದ್ಧ ಅನುಮತಿ
> ಸಮೂಹ ಸಾರಿಗೆ ಮೇಲಿನ ನಿರ್ಬಂಧ ಮುಂದುವರಿಕೆ
> ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶ (ಅನುಮತಿ ಇರುವ ವಾಹನಗಳು ಮಾತ್ರ)
> ಶಾಪಿಂಗ್ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ತೆರೆಯುವಂತಿಲ್ಲ
> ವಸತಿ ಪ್ರದೇಶದಲ್ಲಿ ಒಂಟಿ ಅಂಗಡಿ ತೆರೆಯಲು ಅವಕಾಶ
> ಶೇ.33ರಷ್ಟು ನೌಕರರೊಂದಿಗೆ ಐಟಿ, ಖಾಸಗಿ ಕಂಪನಿಗಳು ಓಪನ್
> ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ, ನರೇಗಾ ಕಾಮಗಾರಿಗೆ ಅವಕಾಶ
> ಕೃಷಿ, ಹೈನೋದ್ಯಮ, ಕುಕ್ಕಟೋದ್ಯಮ, ಮತ್ಸೋದ್ಯಮಕ್ಕೆ ಅವಕಾಶ
> ಅಂಗನವಾಡಿ, ಬ್ಯಾಂಕ್, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಅವಕಾಶ
ಕಿತ್ತಳೆ ವಲಯದಲ್ಲಿರುವ 284 ಜಿಲ್ಲೆಗಳಲ್ಲಿ ಏನಿರುತ್ತೆ?
> ಮದ್ಯ ಮಾರಾಟಕ್ಕೆ ಷರತ್ತುಬದ್ಧ ಅವಕಾಶ (2 ಮೀಟರ್ ಅಂತರ ಕಾಯ್ದುಕೊಳ್ಳಬೇಕು)
> ಬಾರ್ ಮಾತ್ರ ಓಪನ್, ರೆಸ್ಟೋರೆಂಟ್‍ಗೆ ಅವಕಾಶ ಇಲ್ಲ
> ಮದ್ಯ ಪಾರ್ಸೆಲ್ ತೆಗೆದುಕೊಂಡು ಹೋಗಬಹುದು
> ಮದ್ಯದಂಗಡಿಯಲ್ಲಿ ಒಮ್ಮೆ ಐವರಿಗೆ ಅವಕಾಶ
> ಪಾನ್ ಶಾಪ್, ಸಲೂನ್ ಓಪನ್ ಮಾಡಲು ಅನುಮತಿ
> ಅಂತರ್ ಜಿಲ್ಲಾ ವಾಹನ ಸಂಚಾರಕ್ಕೆ ಷರತ್ತುಬದ್ಧ ಅನುಮತಿ
> ಟ್ಯಾಕ್ಸಿ, ಕ್ಯಾಬ್‍ಗಳಿಗೆ ಷರತ್ತುಬದ್ಧ ಅವಕಾಶ (ಚಾಲಕ ಮತ್ತು ಒಬ್ಬ ಪ್ರಯಾಣಿಕ)
> ದ್ವಿಚಕ್ರ ವಾಹನಗಳಲ್ಲಿ ಇಬ್ಬರು ಓಡಾಡಬಹುದು
> ಉಳಿದಂತೆ ಕೆಂಪು ವಲಯಕ್ಕೆ ನೀಡಿದ ರಿಲೀಫ್ ಇಲ್ಲಿಗೂ ಅನ್ವಯ
ಹಸಿರು ವಲಯದಲ್ಲಿರುವ 318 ಜಿಲ್ಲೆಗಳಲ್ಲಿ ಏನಿರುತ್ತೆ?
> ಲಾಕ್‍ಡೌನ್ ನಿರ್ಬಂಧ ಅತೀ ಹೆಚ್ಚು ಸಡಿಲಿಕೆ
> ಬಸ್ ಸಂಚಾರಕ್ಕೆ ಷರತ್ತುಬದ್ಧ ಅವಕಾಶ
> ಶೇ.50ರಷ್ಟು ಬಸ್‍ಗಳ ಓಡಾಟಕ್ಕೆ ಅನುಮತಿ
> ಶೇ.50ರಷ್ಟು ಪ್ರಯಾಣಿಕರನ್ನು ಕರೆದೊಯ್ಯಬಹುದು, ಮದುವೆಗೆ 50 ಮಂದಿಗೆ ಮಾತ್ರ ಅನುಮತಿ
> ಉಳಿದಂತೆ ಕೆಂಪು, ಕಿತ್ತಳೆ ವಲಯಕ್ಕೆ ನೀಡಿದ ರಿಲೀಫ್ ಇಲ್ಲಿಗೂ ಅನ್ವಯ
ಹೊಸ ಮಾನದಂಡ ಏನು?
ಈ ಮೊದಲು ಪ್ರಕರಣಗಳು ದ್ವಿಗುಣವಾಗುವುದರ ಮೇಲೆ ಕೆಂಪು, ಕಿತ್ತಳೆ, ಹಸಿರು ವಲಯಗಳನ್ನು ಪ್ರಕಟಿಸಲಾಗುತ್ತಿತ್ತು. ಈಗ ಗುಣಮುಖರಾಗುತ್ತಿರುವ ಸೋಂಕಿತರ ಸಂಖ್ಯೆ ಹಿನ್ನೆಲೆಯಲ್ಲಿ ಪರಿಷ್ಕರಣೆಗೊಳಿಸಲಾಗಿದೆ. ಹೊಸದಾಗಿ ಎಷ್ಟು ಪ್ರಕರಣಗಳು ದಾಖಲಾಗುತ್ತಿದೆ? ಎಷ್ಟು ದಿನಕ್ಕೆ ಪ್ರಕರಣ ದ್ವಿಗುಣವಾಗುತ್ತಿದೆ? ಎಷ್ಟು ರೋಗಿಗಳು ಗುಣಮುಖರಾಗುತ್ತಿದ್ದಾರೆ? ಎಷ್ಟು ಪರೀಕ್ಷೆ ನಡೆಯುತ್ತಿದೆ? ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ -19 ನಿಯಂತ್ರಣಕ್ಕೆ ಕೈಗೊಂಡ ಕ್ರಮ ಹೇಗಿದೆ? ಈ ಮಾನದಂಡಗಳನ್ನು ಆಧಾರಿಸಿ ಪರಿಷ್ಕೃತ ಜಿಲ್ಲೆಗಳ ವಲಯವಾರು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಪ್ರೀತಿ ಸುದನ್ ಎಲ್ಲ ರಾಜ್ಯಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದು ತಿಳಿಸಿದ್ದಾರೆ.
ಪ್ರತಿ ವಾರಕ್ಕೊಮ್ಮೆ ಈ ಪಟ್ಟಿ ಬದಲಾಗುತ್ತದೆ. ಪರಿಷ್ಕರಣೆಯಿಂದಾಗಿ ಕರ್ನಾಟಕದಲ್ಲಿ 3 ಜಿಲ್ಲೆಗಳು ಕೆಂಪು ವಲಯದಲ್ಲಿ, 13 ಜಿಲ್ಲೆಗಳು ಕಿತ್ತಾಳೆ ವಲಯದಲ್ಲಿ, 14 ಜಿಲ್ಲೆಗಳು ಹಸಿರು ವಲಯದಲ್ಲಿ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ, ಬೆಳಗಾವಿ, ಕಲಬುರಗಿ, ಚಿಕ್ಕಬಳ್ಳಾಪುರವನ್ನು ಕೆಂಪು ವಲಯದಿಂದ ಕೈಬಿಡಲಾಗಿದೆ.
ಯಾವ ಜಿಲ್ಲೆ ಯಾವ ವಲಯದಲ್ಲಿದೆ?
ಕೆಂಪು ವಲಯ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು
ಕಿತ್ತಳೆ ವಲಯ: ಬೆಳಗಾವಿ, ವಿಜಯಪುರ, ಕಲಬುರಗಿ, ಬಾಗಲಕೋಟೆ, ಮಂಡ್ಯ, ಬಳ್ಳಾರಿ, ಧಾರವಾಡ, ದಕ್ಷಿಣ ಕನ್ನಡ, ಬೀದರ್, ಚಿಕ್ಕಬಳ್ಳಾಪುರ, ಗದಗ್, ಉತ್ತರ ಕನ್ನಡ, ತುಮಕೂರು.
ಹಸಿರು ವಲಯ: ದಾವಣಗೆರೆ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ, ರಾಯಚೂರು, ಶಿವಮೊಗ್ಗ, ರಾಮನಗರ, ಯಾದಗಿರಿ.