ಬೆಂಗಳೂರು: ಭಾರತ ಸೇರಿ ಜಗತ್ತಿನೆಲ್ಲೆಡೆ ಮತ್ತೊಮ್ಮೆ ಕೊರೊನಾ (Covid-19) ವಕ್ಕರಿಸುವಂತಿದೆ. ಮತ್ತೆ ಕೊರೊನಾ ಕೇಸ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಅಮೆರಿಕಾ, ಬ್ರಿಟನ್, ಚೀನಾ, ಫ್ರಾನ್ಸ್ ದೇಶಗಳಲ್ಲಿ ಕಂಡುಬಂದಿದ್ದ ಕೊರೊನಾದ ಉಪತಳಿ ಜೆಎನ್.1 ಭಾರತದಲ್ಲೂ ಇದೀಗ ಕಂಡುಬಂದಿದೆ.
ನೆರೆಯ ಕೇರಳದಲ್ಲಿ (Kerala) ಮೊದಲ ಕೇಸ್ ಪತ್ತೆಯಾಗಿದೆ. ಜೆಎನ್.1 (JN.1) ಒಮಿಕ್ರಾನ್ ಸಬ್ ವೇರಿಯಂಟ್ ಬಿಎ 2.86 ವಂಶಕ್ಕೆ ಸೇರಿದ್ದಾಗಿದೆ. ಇದನ್ನು ಪಿರೋಲಾ ಎಂದು ಕೂಡ ಕರೆಯಲಾಗುತ್ತದೆ. ಇದು ಅಪಾಯಕಾರಿಯೇ, ಇಲ್ಲವೇ ಎನ್ನುವುದು ಇನ್ನೂ ನಿರ್ಧಾರಿತವಾಗಿಲ್ಲ. ಆದರೆ ಶರವೇಗದಲ್ಲಿ ಹಬ್ಬುತ್ತಿದೆ. ಕೇರಳದ ಕಣ್ಣೂರಿನಲ್ಲಿ 80 ವರ್ಷದ ವೃದ್ಧರೊಬ್ಬರು ಕೋವಿಡ್‌ಗೆ ಬಲಿ ಆಗಿದ್ದಾರೆ. ಇದು ಕಳೆದ 2 ದಿನಗಳಲ್ಲಿ 2ನೇ ಸಾವಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕೇರಳದಲ್ಲಿ ಹೊಸ ತಳಿಗೆ ಇಬ್ಬರು ಸಾವು- ರಾಜ್ಯದಲ್ಲಿ ಆರೋಗ್ಯ ಸಚಿವರ ತುರ್ತುಸಭೆ
ಕಣ್ಣೂರಿನ ಪಾನೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕ ಸಭೆ-ಸಮಾರಂಭಗಳ ಮೇಲೆಯೂ ಹಲವು ನಿರ್ಬಂಧಗಳನ್ನು ಹೇರಲಾಗುತ್ತಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರವೂ ಅಲರ್ಟ್ ಆಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತುರ್ತು ಸಭೆ ನಡೆಸಿ, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಸದ್ಯಕ್ಕೆ 58 ಕೇಸ್ ಅಷ್ಟೇ ಇವೆ. ಆತಂಕ ಬೇಡ ಎಂದಿದ್ದಾರೆ.
ಮಂಗಳವಾರ ತಾಂತ್ರಿಕ ಸಲಹಾ ಸಮಿತಿ ಸಭೆ ಕರೆಯಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸಚಿವರು ಪ್ರತಿಕ್ರಿಯಿಸಿ, ಮಂಗಳವಾರ ಸಭೆ ಬಳಿಕ ಸರ್ಕಾರಕ್ಕೆ ಸಲಹೆಗಳನ್ನ ನೀಡಲಾಗುತ್ತದೆ. ಎಲ್ಲರೂ ಎಚ್ಚರಿಕೆಯಿಂದ ಇರೋಣ. ಅನಾಹುತ ಆಗುವುದಕ್ಕೆ ಬಿಡಬಾರದು ಎಂದಿದ್ದಾರೆ. ಗಡಿ ಭಾಗಗಳನ್ನು ಸೀಲ್ ಮಾಡೋದು, ರೈಲ್ವೇ ವಿಮಾನ ನಿಲ್ದಾಣಗಳಲ್ಲಿ ಸದ್ಯಕ್ಕೆ ತಪಾಸಣೆ ಮಾಡೋದು ಸರಿಯಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಗಳನ್ನ ಹೆಚ್ಚು ಮಾಡುತ್ತೇವೆ. ರಾಜ್ಯ, ಜಿಲ್ಲಾ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆಗೆ ಸಿದ್ಧತೆ ನಡೆದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಭೀತಿ ಮತ್ತೆ ಶುರು; ಕೇರಳದ ಮಹಿಳೆಯಲ್ಲಿ ಕೋವಿಡ್ ಉಪತಳಿ ಜೆಎನ್.1 ಪತ್ತೆ
ಏನು ಮಾಡಬೇಕು?
* ಮಾಸ್ಕ್ ಧರಿಸಬೇಕು
* ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು
* ರೋಗ ಲಕ್ಷಣ ಇದ್ದರೆ ವೈದ್ಯರನ್ನ ಭೇಟಿಯಾಗಿ
* ಗುಂಪುಗೂಡಬಾರದು
* ಆರೋಗ್ಯಕರ ಆಹಾರ ಸೇವಿಸಬೇಕು
ಏನು ಮಾಡಬಾರದು?
* ಸೋಂಕಿತ ವ್ಯಕ್ತಿ ಇದ್ದರೆ ಆಲಂಗಿಸಬಾರದು
* ಕೈ ಕುಲುಕಬಾರದು
* ನೀರಿನ ಬಾಟಲಿ, ಆಹಾರ, ಕರವಸ್ತ್ರ, ಟವೆಲ್ ಹಂಚಿಕೊಳ್ಳಬಾರದು
* ಸೋಪಿನಿಂದ ಕೈತೊಳೆದುಕೊಳ್ಳುತ್ತಿರಬೇಕು
* ಪದೇ ಪದೇ ಕಣ್ಣು, ಬಾಯಿ ಮುಟ್ಟಿಕೊಳ್ಳಬಾರದು
* ಪದೇ ಪದೇ ಉಗುಳಬಾರದು
ಜೆಎನ್.1 ಉಪತಳಿಯ ಗುಣಲಕ್ಷಣಗಳು
* ಮೂಗು ಕಟ್ಟುವಿಕೆ
* ಜ್ವರ
* ಕೆಮ್ಮು
* ಸುಸ್ತು
* ಅತಿಸಾರ
* ತಲೆನೋವು
* ಸದಾ ಸ್ರವಿಸುವ ಮೂಗು