ಬೆಂಗಳೂರು: ದೇಶದಲ್ಲಿ ದಿನಕಳೆದಂತೆ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ 1334 ಮಂದಿಗೆ ಸೋಂಕು ತಗುಲಿದ್ದು, 34 ಸೋಂಕಿತರು ಬಲಿ ಆಗಿದ್ದಾರೆ. ದೇಶದಲ್ಲಿ 17,000ಕ್ಕೂ ಹೆಚ್ಚು ಮಂದಿ ಕೊರೋನಾದಿಂದ ಬಾಧಿತರಾಗಿದ್ದೂ, 532 ಮಂದಿ ಸಾವನ್ನಪ್ಪಿದ್ದಾರೆ.
ದೇಶದ ಏಳು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಸಾವಿರ ದಾಟಿದೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 532 ಮಂದಿಗೆ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 4,200 ದಾಟಿದೆ. ಗುಜರಾತ್‍ನಲ್ಲಿ ಇಂದೊಂದೆ ದಿನ 367 ಮಂದಿಗೆ ಸೋಂಕು ತಗುಲಿದ್ದೂ, ಅಲ್ಲಿ ಬಾಧಿತರ ಸಂಖ್ಯೆ 1743 ದಾಟಿದೆ. ದೇಶದಲ್ಲಿ ಕೊರೊನಾ ಸ್ಯಾಂಪಲ್ ಟೆಸ್ಟ್‍ಗಳ ಸಂಖ್ಯೆಯೂ ಹೆಚ್ಚುತ್ತಿದೆ. ನಿನ್ನೆ 37 ಸಾವಿರ ಮಂದಿಗೆ ಕೊರೊನಾ ಪತ್ತೆ ಪರೀಕ್ಷೆ ನಡೆಸಲಾಗಿದೆ. ಇದುವರೆಗೆ ಒಟ್ಟು 3.86 ಲಕ್ಷ ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ.
Advertisement
Advertisement
ಕಳೆದ 14 ದಿನಗಳಲ್ಲಿ 23 ರಾಜ್ಯಗಳ 54 ಜಿಲ್ಲೆಗಳಲ್ಲಿ ಒಂದೇ ಒಂದು ಸೋಂಕು ಪ್ರಕರಣವೂ ವರದಿಯಾಗಿಲ್ಲ. ವ್ಯಾಕ್ಸಿನ್ ಸಂಶೋಧನೆ ಮುಂದುವರಿದಿದ್ದೂ, ಕ್ಲಿನಿಕಲ್ ಟ್ರಯಲ್ಸ್‍ಗಾಗಿ ಐವರು ಮುಂದೆ ಬಂದಿದ್ದಾರೆ ಎಂದು ಐಸಿಎಂಆರ್ ತಿಳಿಸಿದೆ.
Advertisement
ಈ ಮಧ್ಯೆ ಕೊರೊನಾ ವೈರಸ್ ಜಾತಿ, ಧರ್ಮ, ವರ್ಣ, ಭಾಷೆ, ಗಡಿ, ಮೇಲು-ಕೀಳು ಅಂತಾ ನೋಡಿ ಬರಲ್ಲ. ಕೊರೊನಾ ನಿವಾರಣೆಗಾಗಿ ನಾವಿಡುವ ಪ್ರತಿಯೊಂದು ಹೆಜ್ಜೆಯೂ ದೇಶದ ಐಕ್ಯತೆ, ಸಹೋದರತ್ವದ ಸಂಕೇತವಾಗಿ ನಿಲ್ಲಬೇಕು. ನಾವೆಲ್ಲಾ ಎಲ್ಲಾ ಸೇರಿ ಒಟ್ಟಾಗಿ ಕೊರೋನಾ ಎದುರಿಸಬೇಕಿದೆ. ನಾವೆಲ್ಲಾ ಒಂದು ಎಂಬ ಭಾವವನ್ನು ಎಲ್ಲರಲ್ಲೂ ಮೂಡಿಸಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Advertisement
ಕೊರೊನಾ ರಕ್ಕಸನ ಹಿಡಿತಕ್ಕೆ ಸಿಲುಕಿ ಇಡೀ ಜಗತ್ತು ವಿಲವಿಲ ಅಂತಿದೆ. ಇದುವರೆಗೆ 23.60 ಲಕ್ಷ ಮಂದಿ ಬಾಧಿತರಾಗಿದ್ದಾರೆ. 1.62 ಲಕ್ಷ ಮಂದಿ ಬಲಿ ಆಗಿದ್ದಾರೆ. ಅಮೆರಿಕಾದಲ್ಲಿ ಕೊರೊನಾಗೆ ನಿನ್ನೆ ಒಂದೇ ದಿನ 3,856 ಮಂದಿ ಬಲಿಯಾಗಿದ್ದು, ಮೃತರ ಸಂಖ್ಯೆ 40 ಸಾವಿರ ಸಮೀಪಿಸಿದೆ. 7.40 ಲಕ್ಷ ಮಂದಿಗೆ ವೈರಸ್ ತಗುಲಿದೆ. ನ್ಯೂಯಾರ್ಕ್ ಕೊರೊನಾ ವೈರಸ್‍ನ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ.
ಇದುವರೆಗೆ 8 ಸಾವಿರ ಮಂದಿ ಸಾವನ್ನಪ್ಪಿದ್ದು, 1.22 ಲಕ್ಷ ಮಂದಿಗೆ ವೈರಸ್ ಅಟ್ಯಾಕ್ ಆಗಿದೆ. ನ್ಯೂಜೆರ್ಸಿಯ ಆಸ್ಪತ್ರೆಗಳಲ್ಲಿ ಶವಗಳ ರಾಶಿ ಕಂಡುಬರುತ್ತಿವೆ. ಜರ್ಮನಿ, ಇಟಲಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸಾವಿನ ಪ್ರಮಾಣ ಕೊಂಚ ತಗ್ಗಿದೆ. ಆಫ್ರಿಕಾದಲ್ಲಿ ಕೊರೊನಾಗೆ ಸಾವಿರಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದಾರೆ. ಸ್ಪೇನ್, ಜಪಾನ್, ಮೆಕ್ಸಿಕೋ ದೇಶಗಳಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್ ಜಾರಿಯಲ್ಲಿದೆ.
ಕೊರೊನಾ ತಡೆಗೆ ಅಮೆರಿಕ ಹೆಚ್ಚುವರಿ ಕ್ರಮ ಕೈಗೊಳ್ಳದೇ ಇದ್ದಲ್ಲಿ ಲಕ್ಷಾಂತರ ಮಂದಿ ಮತ್ತೆ ಬಡತನ ರೇಖೆಗಿಂತ ಕೆಳಗೆ ಹೋಗ್ತಾರೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಬ್ರಿಟನ್ ರಾಣಿ ಎಲಿಜಬೆತ್ ತಮ್ಮ 94ನೇ ಜನ್ಮದಿನದ ಆಚರಣೆಯನ್ನು ರದ್ದು ಮಾಡಿದ್ದಾರೆ. ಬಾಂಗ್ಲಾ ದೇಶದ ಢಾಕಾದಲ್ಲಿ ಧಾರ್ಮಿಕ ಮುಖಂಡನೊಬ್ಬನ ಅಂತ್ಯಕ್ರಿಯೆಯಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡ ಘಟನೆ ನಡೆದಿದೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲಾಗದೇ ಮೂಕ ಪ್ರೇಕ್ಷಕರಾಗಿದ್ದಾರೆ. ಇದುವರೆಗೆ ಬಾಂಗ್ಲಾದಲ್ಲಿ 2114 ಮಂದಿಗೆ ಸೋಂಕು ತಗುಲಿದ್ದು, 84 ಮಂದಿ ಬಲಿ ಆಗಿದ್ದಾರೆ. ಪಾಕಿಸ್ತಾನದಲ್ಲಿ ಸೋಂಕಿತರ ಸಂಖ್ಯೆ 8 ಸಾವಿರ ದಾಟಿದೆ.