– ಅಮೆರಿಕದಲ್ಲಿ ಶೂನ್ಯಕ್ಕಿಂತ ಕಡಿಮೆ ಬೆಲೆಗೆ ತೈಲ ಕುಸಿತ
– ಬ್ರೆಂಟ್ ಕಚ್ಚಾ ತೈಲದ ಬೆಲೆ ಇಳಿಕೆ
ಕೊರೊನಾ ವೈರಸ್ ಹಾವಳಿಯಿಂದ ವಿಶ್ವದ ಹಲವೆಡೆ ಲಾಕ್‍ಡೌನ್ ಘೋಷಣೆಯಾಗಿದ್ದು, ಬೇಡಿಕೆ ಇಲ್ಲದೇ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದೆ. ಅಮೆರಿಕದ ಇತಿಹಾಸ ಇದೇ ಮೊದಲ ಬಾರಿಗೆ ಶೂನ್ಯಕ್ಕಿಂತಲೂ ಕಡಿಮೆ ಬೆಲೆಗೆ ಕುಸಿದಿದೆ. ಕಚ್ಚಾ ತೈಲದ ಬೆಲೆ ಕುಸಿದ ಹಿನ್ನೆಲೆಯಲ್ಲಿ ಭಾರತದಲ್ಲೂ ದರ ಇಳಿಕೆಯಾಗಬೇಕಿತ್ತು. ಆದರೆ ದರ ಇಳಿಕೆ ಆಗುತ್ತಿಲ್ಲ. ಹೀಗಾಗಿ ಯಾಕೆ ದರ ಇಳಿಕೆ ಆಗುತ್ತಿಲ್ಲ? ಮುಂದೆ ಇಳಿಕೆ ಆಗುತ್ತಾ ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಅಮೆರಿಕದಲ್ಲಿ ಎಷ್ಟು ಇಳಿಕೆಯಾಗಿದೆ?
ಸೋಮವಾರ ಟೆಕ್ಸಾಸ್ ಫ್ಯೂಚರ್ ಮಾರುಕಟ್ಟೆಯಲ್ಲಿ 1 ಬ್ಯಾರಲ್ (158 ಲೀ) ಕಚ್ಚಾತೈಲದ ಬೆಲೆ 18 ಡಾಲರ್ ನಿಂದ ಆರಂಭಗೊಂಡು ಕೊನೆಗೆ -37.63 ಡಾಲರ್ ಗೆ ಕೊನೆಯಾಗಿದೆ. ಮೇ ತಿಂಗಳ ಪೂರೈಕೆಗಾಗಿ ಸೋಮವಾರ ನಡೆದ ಫ್ಯೂಚರ್ ಟ್ರೇಡಿಂಗ್‍ನಲ್ಲಿ ವೇಳೆ ಈ ಕುಸಿತ ಕಂಡು ಬಂದಿದೆ.
Advertisement
Advertisement
ಇಳಿಕೆಗೆ ಕಾರಣ ಏನು?
ಜೂನ್ ತಿಂಗಳವರೆಗೆ ಆರ್ಥಿಕತೆ ಚೇತರಿಕೆ ಕಾಣಲು ಸಾಧ್ಯವಿಲ್ಲ ಎಂಬ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮೇ ತಿಂಗಳ ಖರೀದಿಗೆ ಯಾರೂ ಮುಂದಾಗಲಿಲ್ಲ. ಇದರ ಜೊತೆ ಅಮೆರಿಕದಲ್ಲಿ ಬೇಡಿಕೆಗಿಂತ ತೈಲ ಉತ್ಪಾದನೆ ಜಾಸ್ತಿಯಾಗಿ ಸಂಗ್ರಹ ಮಾಡಲು ಜಾಗ ಇಲ್ಲದ ಕಾರಣ ಬೆಲೆ ಇಳಿಕೆಯಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮತ್ತೆ ಮೋದಿ ಕೈ ಹಿಡಿದ ಕಚ್ಚಾ ತೈಲ – ಒಂದೇ ದಿನ ಭಾರೀ ಇಳಿಕೆ, ದರ ಸಮರ ಆರಂಭ
Advertisement
ಭಾರತ ಯಾಕೆ ಖರೀದಿ ಮಾಡುತ್ತಿಲ್ಲ?
ಕಡಿಮೆ ಬೆಲೆ ಇರುವ ಹಿನ್ನೆಲೆಯಲ್ಲಿ ಭಾರತ ಯಾಕೆ ಅಮೆರಿಕದಿಂದ ಕಚ್ಚಾ ತೈಲ ಖರೀದಿ ಮಾಡಬಾರದು ಎಂಬ ಪ್ರಶ್ನೆ ಏಳುವುದು ಸಹಜ. ಪ್ರಶ್ನೆ ಬಹಳ ಸುಲಭವಾಗಿ ಕೇಳಬಹುದಾದರೂ ಉತ್ತರ ಮಾತ್ರ ಅಷ್ಟು ಸುಲಭ ಇಲ್ಲ. ಅಮೆರಿಕದ ಜೊತೆ ವಿವಿಧ ವ್ಯವಹಾರ ಮಾಡುತ್ತಿರುವ ಭಾರತ ಅಮೆರಿಕದಿಂದ ತೈಲ ಖರೀದಿಸುತ್ತಿಲ್ಲ. ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ(ಒಪೆಕ್) ಬೆಲೆ ನಿರ್ಧಾರ ಮಾಡುವ ಬ್ರೆಂಚ್ ಕಚ್ಚಾ ತೈಲವನ್ನು ಭಾರತ ಖರೀದಿಸುತ್ತದೆ. ವೆಸ್ಟ್ ಟೆಕ್ಸಾಸ್ ಇಂಟರ್‍ಮೀಡಿಯೆಟ್(ಡಬ್ಲ್ಯೂಟಿಐ) ಎನ್ನುವುದು ಅಮೆರಿಕದ ಬೆಂಚ್ ಮಾರ್ಕ್ ಆಗಿದೆ.
Advertisement
ವಿಶ್ವದ ಮೂರನೇ ಎರಡರಷ್ಟು ರಾಷ್ಟ್ರಗಳಿಗೆ ಬ್ರೆಂಟ್ ಕಚ್ಚಾ ತೈಲ ಪೊರೈಕೆ ಆಗುತ್ತಿದೆ. ಯುರೋಪ್, ಏಷ್ಯಾ, ಆಫ್ರಿಕಾ ಸೇರಿದಂತೆ ಹಲವು ಮಧ್ಯ ಪ್ರಾಚ್ಯ ದೇಶಗಳಿಗೆ ಬ್ರೆಂಟ್ ಕಚ್ಚಾ ತೈಲ ಸರಬರಾಜು ಆಗುತ್ತದೆ. ಬ್ರೆಂಟ್ ಕಚ್ಚಾ ತೈಲ ಸಮುದ್ರದಲ್ಲೇ ಉತ್ಪಾದನೆಯಾಗಿ ಸುಲಭವಾಗಿ ಹಡಗುಗಳಿಗೆ ತುಂಬಿಸಿ ಸಾಗಾಟ ಮಾಡಬಹುದು. ಆದರೆ ಡಬ್ಲ್ಯೂಟಿಐ ಅಮೆರಿಕದ ಕುಶಿಂಗ್, ಒಕ್ಲಹೋಮದಲ್ಲಿ ಮಾತ್ರ ಸೀಮಿತವಾಗಿದ್ದು ಸಾಗಾಟ ಮತ್ತು ಸಂಗ್ರಹಣೆ ಕಷ್ಟ. ಅಮೆರಿಕದಿಂದ ಭಾರತಕ್ಕೆ ತೈಲ ಸಾಗಾಟ ಮಾಡುವುದು ಬಹಳ ತ್ರಾಸದಾಯಕ.
ಖರೀದಿಸಿದ್ರೂ ಸಂಗ್ರಹಿಸಲು ಸಾಧ್ಯವಿಲ್ಲ:
ಭಾರತ ಕಚ್ಚಾ ತೈಲವನ್ನು ಆಮದು ಮಾಡಿ ಇಲ್ಲಿ ಸಂಸ್ಕರಿಸುತ್ತದೆ. ಭಾರತ ಡಾಲರ್ ಮೂಲಕ ಕಚ್ಚಾ ತೈಲವನ್ನು ಖರೀದಿ ಮಾಡುತ್ತದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ ಕಡಿಮೆಯಾದರೆ ಹೆಚ್ಚಿನ ಬೆಲೆ ನೀಡಬೇಕಾಗುತ್ತದೆ. ಇದರ ಜೊತೆ ತೈಲ ಖರೀದಿ, ಸಾಗಾಟ, ಸಂಸ್ಕರಣೆ, ಬಳಿಕ ಡೀಲರ್ ಗಳಿಗೆ ಮಾರಾಟ ಇವುಗಳನ್ನು ಗಮನಿಸಿಕೊಂಡು ದೇಶಿಯ ದರ ನಿಗದಿಯಾಗುತ್ತದೆ. ಇದನ್ನೂ ಓದಿ: ಸೌದಿ ಕಂಪನಿ ಜೊತೆ ಡೀಲ್ – ಭಾರತದ ಅತಿ ದೊಡ್ಡ ಎಫ್‍ಡಿಐ ಒಪ್ಪಂದಕ್ಕೆ ರಿಲಯನ್ಸ್ ಸಹಿ
ಕಚ್ಚಾ ತೈಲ ದರ ಇಳಿಕೆ ಆಗುತ್ತಿದೆ ನಿಜ. ಆದರೆ ಅದನ್ನು ಖರೀದಿಸಿ ಸಂಗ್ರಹಿಸುವ ಸಾಮರ್ಥ್ಯ ಸಹ ದೇಶಕ್ಕೆ ಇರಬೇಕು. ಸದ್ಯ ಭಾರತ ಮೂರು ಭೂಗತ ತೈಲ ಸಂಗ್ರಹಾಗಾರಗಳನ್ನು ಹೊಂದಿದೆ. ಸದ್ಯ ಇಲ್ಲಿ 13 ದಿನಕ್ಕೆ ಆಗುವಷ್ಟು ತೈಲಗಳನ್ನು ಸಂಗ್ರಹ ಮಾಡಬಹುದಾಗಿದೆ. ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಒಟ್ಟು 36.87 ದಶಲಕ್ಷ ಬ್ಯಾರೆಲ್ ತೈಲವನ್ನು ಈ ಸಂಗ್ರಹಾಗಾರಗಳಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು.
ಲಾಕ್‍ಡೌನ್ ಘೋಷಣೆಯಾಗಿರುವ ಕಾರಣ ವಾಹನಗಳ ಸಂಚಾರ ಕಡಿಮೆ ಆಗಿದ್ದರಿಂದ ಪೆಟ್ರೋಲ್, ಡೀಸೆಲ್ ಗಳಿಗೆ ಬೇಡಿಕೆ ಇಲ್ಲ. ಲಾಕ್‍ಡೌನ್ ಘೋಷಣೆಗೂ ಮುನ್ನ ತೈಲ ಬೇಗನೆ ಮಾರಾಟವಾಗುತ್ತಿತ್ತು. ಆದರೆ ಈಗ ಬಂಕ್ ಗಳಲ್ಲಿ ಸಂಗ್ರಹವಾದ ಪೆಟ್ರೋಲ್, ಡೀಸೆಲ್ ಹಲವು ದಿನಗಳವರೆಗೆ ಇರುತ್ತದೆ. ಬೇಡಿಕೆಯೇ ಇಲ್ಲದ ಮೇಲೆ ಸಂಸ್ಕರಿಸಿದ ತೈಲವನ್ನು ವಿತರಣೆ ಮಾಡಲು ಸಾಧ್ಯವಿಲ್ಲ.
ಎಲ್ಲಿ ತೈಲ ಸಂಗ್ರಹಾಗಾರಗಳಿವೆ?
ಭಾರತದ ತೈಲ ಸಂಗ್ರಹ ಏನೇನು ಸಾಲದು. ಒಟ್ಟು 90 ದಿನಗಳ ಬಳಕೆಗೆ ಆಗುವಷ್ಟು 13.32 ಮೆಟ್ರಿಕ್ ಟನ್ ತೈಲ ಸಂಗ್ರಹ ಅಗತ್ಯತೆ ಭಾರತಕ್ಕಿದೆ. ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐಎಸ್‍ಪಿಆರ್‍ಎಲ್) ಮಂಗಳೂರು, ಉಡುಪಿ ಬಳಿಯ ಪಾದೂರು, ವಿಶಾಖಪಟ್ಟಣಂನಲ್ಲಿ ಭೂಗತ ತೈಲ ಸಂಗ್ರಹಣ ಘಟಕಗಳನ್ನು ಸ್ಥಾಪಿಸಿದೆ. ಮುಂದೆ ಒಡಿಶಾದ ಚಂಡಿಕೋಲ್, ರಾಜಸ್ಥಾನದ ಬಿಕಾನೆರ್, ಗುಜರಾತಿನ ರಾಜ್‍ಕೋಟ್ ಬಳಿ ಭೂಗತ ತೈಲಗಾರ ನಿರ್ಮಿಸಲು ಮುಂದಾಗುತ್ತಿದೆ. ಇದನ್ನೂ ಓದಿ: ಉಡುಪಿಯಲ್ಲಿ ತೈಲ ಸಂಗ್ರಹಿಸಲಿದೆ ಸೌದಿ ಅರಾಮ್ಕೊ
ದರ ಇಳಿಕೆಯಾಗುತ್ತಾ?
ರಷ್ಯಾ ಒಪೆಕ್ ರಾಷ್ಟ್ರಗಳ ಜೊತೆಗಿತ ಒಪ್ಪಂದದಿಂದ ಹಿಂದೆ ಸರಿದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಸಮರ ಆರಂಭಗೊಂಡಿತ್ತು. ಸೌದಿ ಭಾರೀ ಪ್ರಮಾಣದಲ್ಲಿ ತೈಲ ಉತ್ಪಾದಿಸಲು ಮುಂದಾಗಿದ್ದರಿಂದ ಕಚ್ಚಾ ತೈಲದ ಬೆಲೆ ಭಾರೀ ಇಳಿಕೆ ಕಂಡಿತ್ತು. ಈ ಬೆನ್ನಲ್ಲೇ ಕೊರೊನಾ ಹಾವಳಿಯಿಂದ ರಷ್ಯಾ ಒಪೆಕ್ ರಾಷ್ಟ್ರಗಳ ಜೊತೆ ಒಪ್ಪಂದ ಮುಂದುವರಿಸಿ ತೈಲ ಉತ್ಪಾದನೆ ಕಡಿತಕ್ಕೆ ಒಪ್ಪಿಗೆ ಸೂಚಿಸಿತ್ತು. ಪರಿಣಾಮ ಬೆಲೆ ಸಮರ ಅಂತ್ಯಗೊಂಡಿತ್ತು. ಬೆಲೆ ಸಮರ ಅಂತ್ಯಗೊಂಡರೂ ಬೇಡಿಕೆ ಇಲ್ಲದ ಕಾರಣ ಬ್ರೆಂಟ್ ಕಚ್ಚಾ ತೈಲದ ಬೆಲೆ ಕಡಿಮೆ ಆಗುತ್ತಿದೆ.
ಭಾರತದಲ್ಲಿ ದರ ಇಳಿಕೆಯಾಗುತ್ತಾ?
ಸದ್ಯ ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ಪೆಟ್ರೋಲ್, ಡೀಸೆಲ್ ನಿಂದ ಬರುತ್ತಿದೆ. ಈ ಕಾರಣಕ್ಕೆ ತೈಲವನ್ನು ಜಿಎಸ್‍ಟಿಯಿಂದ ಹೊರಗಿಡಲಾಗಿದೆ. ಈಗಾಗಲೇ ಭಾರತದಲ್ಲಿ ಕಳೆದ ವರ್ಷ ಹತ್ತಿರ ಹತ್ತಿರ 80-90 ರೂ. ವರೆಗೆ ಪೆಟ್ರೋಲ್/ ಡೀಸೆಲ್ ದರ ತಲುಪಿದೆ. ಗ್ರಾಹಕ ಇಷ್ಟು ಬೆಲೆ ನೀಡಿ ಖರೀದಿಸಿದ ಮೇಲೆ ಬೆಲೆ ಕಡಿಮೆ ಆಗುವುದು ಅನುಮಾನ. ಬೆಲೆ ಕಡಿಮೆಯಾದರೂ ಅಬಕಾರಿ ಸುಂಕ ಏರಿಸಿ ಹಳೆಯ ಬೆಲೆಯಲ್ಲಿ ಇರುವಂತೆ ನೋಡಿಕೊಳ್ಳಲಾಗುತ್ತದೆ. ಕೇಂದ್ರ ಸರ್ಕಾರ ಸೆಸ್ ಜಾರಿ ಮಾಡಿದರೆ ರಾಜ್ಯ ಸರ್ಕಾರಗಳು ಬಜೆಟ್ ನಲ್ಲಿ ಅಬಕಾರಿ ಸುಂಕ ಹೆಚ್ಚಿಸುತ್ತಿವೆ. ಮುಂದಿನ ದಿನಗಳಲ್ಲಿ ಉತ್ಪಾದನೆ ಹೆಚ್ಚಾಗಿ ಆರ್ಥಿಕತೆ ಸರಿಯಾದ ದಾರಿಯಲ್ಲಿ ಸಾಗುವ ಲಕ್ಷಣ ಕಂಡುಬಂದರೆ ಅಬಕಾರಿ ಸುಂಕವನ್ನು ಸರ್ಕಾರ ಇಳಿಸಿದರೆ ದರ ಇಳಿಯಬಹುದು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ