ಬೆಂಗಳೂರು: ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣದ ಬಗ್ಗೆ ದೊಡ್ಡ ಮಟ್ಟದ ಹೋರಾಟ ನಡೆಸುತ್ತಿರುವ ಬಿಜೆಪಿ ನಾಯಕರಿಗೆ ಬಿಗ್ ಶಾಕ್ ಸಿಗುವ ಸಾಧ್ಯತೆಯಿದೆ. ಕೋವಿಡ್ ಸಂದರ್ಭದಲ್ಲಿ 2 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಇಂದು ಪ್ರಬಲವಾದ ಅಸ್ತ್ರ ಸಿಗುವ ಸಾಧ್ಯತೆಯಿದೆ.
ಬಿಜೆಪಿ ಸರ್ಕಾರದ (BJP Government) ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ (Covid) ಅಕ್ರಮಗಳ ತನಿಖೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ನಾ (John Michael D’Cunha) ನೇತೃತ್ವದ ವಿಚಾರಣಾ ಆಯೋಗ ಇಂದು ಮಧ್ಯಾಹ್ನ ಸಿಎಂ ಸಿದ್ದರಾಮಯ್ಯನವರಿಗೆ (CM Siddaramaiah) ವರದಿ ಸಲ್ಲಿಸಲಿದೆ.
ಕಳೆದ ಬಿಜೆಪಿ ಸರ್ಕಾರ ಅವಧಿಯಲ್ಲಿ ಆರೋಗ್ಯ ಇಲಾಖೆ (Health Department) ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣದ ಬಗ್ಗೆ ಆಯೋಗ ತನಿಖೆ ನಡೆಸಿದೆ. ಇದನ್ನೂ ಓದಿ: Rain Alert | ಆಲಮಟ್ಟಿ ಡ್ಯಾಂನಿಂದ 1.76 ಲಕ್ಷ, ನಾರಾಯಣಪುರ ಜಲಾಶಯದಿಂದ 1.90 ಲಕ್ಷ ಕ್ಯುಸೆಕ್ ನೀರು ನದಿಗೆ
ಕೋವಿಡ್ ವೇಳೆ ಬಿಜೆಪಿ ಸರ್ಕಾರ ಔಷಧ, ವೈದ್ಯಕೀಯ ಉಪಕರಣ ಖರೀದಿಸಿತ್ತು. ಈ ಸಂಬಂಧ ಸಲ್ಲಿಸಲಾಗಿದ್ದ ಲೆಕ್ಕಪತ್ರ ಸಮಿತಿಯ ವರದಿಯಲ್ಲಿ ಅಕ್ರಮ ನಡೆದಿರುವ ಗಂಭೀರ ಆರೋಪ ಕೇಳಿ ಬಂದಿತ್ತು.
ಕೋವಿಡ್ ನಿರ್ವಹಣೆ ತಡೆಗಟ್ಟಲು ಔಷಧ, ಉಪಕರಣಗಳು ಹಾಗೂ ಸಾಮಾಗ್ರಿಗಳ ಖರೀದಿ, ಆಮ್ಲಜನಕ ನಿರ್ವಹಣೆ, ಆಮ್ಲಜನಕ ಕೊರತೆಯಿಂದ ಉಂಟಾದ ಸಾವುಗಳ ಕುರಿತು ಆಯೋಗ ತನಿಖೆ ನಡೆಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ, ಕೋವಿಡ್ ಭ್ರಷ್ಟಾಚಾರ ಕುರಿತ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಬೇಕು ಎಂದು ಆಗ್ರಹಿಸಿದ್ದರು. ಆದರೆ ಬಿಜೆಪಿ ಸರ್ಕಾರ ಈ ಆರೋಪವನ್ನು ತಳ್ಳಿ ಹಾಕಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ನಂತರ ಜಾನ್ ಮೈಕಲ್ ಡಿ ಕುನ್ನಾ ನೇತೃತ್ವದ ವಿಚಾರಣಾ ಆಯೋಗವನ್ನು ರಚಿಸಿತ್ತು.