ಕಾರವಾರ: 20 ದಿನದ ಅಂತರದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಹೊಸ ಪ್ರಕರಣ ಪತ್ತೆಯಾಗುವ ಮೂಲಕ ಆರೆಂಜ್ ಝೋನ್ ನಿಂದ ಗ್ರೀನ್ ಝೋನ್ ನತ್ತ ಸಾಗುತ್ತಿರುವುದರಿಂದ ಜಿಲ್ಲೆಯ ಜನ ಆತಂಕ ಪಡುವಂತಾಗಿದೆ.
ಇಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ನಲ್ಲಿ ಭಟ್ಕಳದ 28 ವರ್ಷದ ಯುವಕ ಎಂದು ನಮೂದಾಗಿ ಪ್ರಕಟಗೊಂಡಿತ್ತು. ಆದರೆ ಅದು 18 ವರ್ಷದ ಯುವತಿಯಾಗಿದ್ದು ಸರ್ಕಾರದ ಪ್ರಕಟಣೆಯಲ್ಲಿ ಲೋಪದಿಂದ ಯುವತಿ ಬದಲು ಪುರುಷ ಎಂದು ಹಾಗೂ ವಯಸ್ಸು ಸಹ ಬದಲಾಗಿ ನಮೂದು ಆಗಿದ್ದರಿಂದ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ತಪ್ಪಿನ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಸಂಜೆಯ ಬುಲೆಟಿನ್ ನಲ್ಲಿ ತಪ್ಪು ತಿದ್ದಿ ಪ್ರಕಟಿಸುವುದಾಗಿ ತಿಳಿಸಿದ್ದಾರೆ ಎಂದರು.
ಕೋವಿಡ್19: ಬೆಳಗಿನ ವರದಿ
ಒಟ್ಟು ಪ್ರಕರಣಗಳು: 659
ಮೃತಪಟ್ಟವರು: 28
ಗುಣಮುಖರಾದವರು: 324
ಹೊಸ ಪ್ರಕರಣಗಳು: 8
ಇತರೆ ಮಾಹಿತಿ: ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.#ಮನೆಯಲ್ಲೇಇರಿ#KarnatakaFightsCorona@BSYBJP pic.twitter.com/LflE5lfj4L
— CM of Karnataka (@CMofKarnataka) May 5, 2020
ಇಂದು ದೃಢಪಟ್ಟ ಭಟ್ಕಳದ ಸೋಂಕಿತ ಯುವತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಸೋಂಕು ತಗುಲಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಆದರೆ ಯುವತಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಭಟ್ಕಳದ ಈ ಸೋಂಕಿತ ಯುವತಿಯ ಅಕ್ಕ, ಬಾವ ತಮ್ಮ ಮಗುವಿಗೆ ಅನಾರೋಗ್ಯದ ಕಾರಣ ಪಾಸ್ ಪಡೆದು ಮಂಗಳೂರಿಗೆ ಏ.19ಕ್ಕೆ ತೆರಳಿದ್ದರು.
ಪರಿಚಯಸ್ಥರೊಬ್ಬರ ಮನೆಯಲ್ಲಿ ಉಳಿದು ಏ.20ರಂದು ಮಗುವಿಗೆ ಚಿಕಿತ್ಸೆ ಕೊಡಿಸಿ ಭಟ್ಕಳಕ್ಕೆ ವಾಪಸ್ಸಾಗಿದ್ದರು. ಹೀಗಾಗಿ ಇವರ ಸಂಪರ್ಕದಲ್ಲಿದ್ದ ಯುವತಿಗೆ ಸೋಂಕು ಹರಡಿರುವ ಸಾಧ್ಯತೆ ಕುರಿತು ಮಾಹಿತಿ ಕಲೆ ಹಾಕಲಾಗಿದೆ. ಯುವತಿಯ ಮನೆಯಲ್ಲಿದ್ದ 10 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಚಿಕ್ಕ ಮಗು ಸಹಿತ ಒಟ್ಟು 10 ಮಂದಿಯನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಕರಣಗಳ ಹೆಚ್ಚಳದಿಂದ ಆರೆಂಜ್ ಝೋನ್ ನಲ್ಲಿದ್ದ ಜಿಲ್ಲೆ ಮತ್ತೆ ರೆಡ್ ಝೋನ್ ಗೆ ಸೇರ್ಪಡೆಯಾಗಿದೆ. ಜಿಲ್ಲೆಯಲ್ಲಿ ಪತ್ತೆಯಾದ 24 ಕೊರೊನಾ ಸೋಂಕಿತರ ಪೈಕಿ 8 ಮಂದಿಗೆ ಈ ಫಸ್ಟ್ ನ್ಯೂರೋ ಆಸ್ಪತ್ರೆಯ ನಂಟಿದೆ ಎನ್ನುವುದು ಸ್ಪಷ್ಟವಾಗಿದೆ.
ಫಸ್ಟ್ ನ್ಯೂರೋ ನಂಟು ಹೇಗೆ..?:
ಏ.23ರಂದು ಸಾವನ್ನಪ್ಪಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕಸಬಾದ ವೃದ್ಧೆ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಾಗಿದ್ದರು. ಆ ವೃದ್ಧೆಯ ಸೊಸೆ ಏ.19ರಂದು ಮೃತಪಟ್ಟಿದ್ದು, ಅತ್ತೆಯ ಉಪಚಾರ ಹಿನ್ನೆಲೆಯಲ್ಲಿ ಅದೇ ಆಸ್ಪತ್ರೆಗೆ ಬಂದು ಹೋಗುತ್ತಿದ್ದರು. ಏ.30ರಂದು ನಿಧನರಾದ ಕಸಬಾದ ಇನ್ನೋರ್ವ ವೃದ್ಧೆ ಈ ಇಬ್ಬರು ಅಕ್ಕಪಕ್ಕದ ಮನೆಯವರಾಗಿದ್ದು, ಈ ವೃದ್ಧೆಯ ಪುತ್ರಿಯೂ ಕೊರೊನಾ ಪಾಸಿಟಿವ್ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ ಕೊರೊನಾ ಪಾಸಿಟಿವ್ ಬಂದ ಶಕ್ತಿನಗರದ ವೃದ್ಧೆಯೂ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮತ್ತು ಅವರ ಪುತ್ರ ಅದೇ ಆಸ್ಪತ್ರೆಯಲ್ಲಿ ತಾಯಿಯ ಸಹಾಯಕ್ಕಿದ್ದವರು. ಕೊರೊನಾ ದೃಢಪಟ್ಟ ಪಾಣೆಮಂಗಳೂರಿನ ಮಹಿಳೆ ಕೂಡ ಅದೇ ಆಸ್ಪತ್ರೆಯಲ್ಲಿ ಸಹಾಯಕ್ಕಿದ್ದವರು. ಇತ್ತೀಚೆಗೆ ಕೊರೊನಾ ಧೃಢಪಟ್ಟ ಪಾಣೆಮಂಗಳೂರಿನ ಬೊಳೂರಿನ ಮಹಿಳೆ ಕಳೆದ ಒಂದು ವಾರದ ಹಿಂದಷ್ಟೇ ಅಲ್ಲಿಂದ ಚಿಕಿತ್ಸೆ ಪಡೆದು ಬಿಡುಗಡೆಗೊಂಡವರಾಗಿದ್ದಾರೆ.