ನವದೆಹಲಿ: ಇತ್ತೀಚೆಗೆ ಐಎಎಸ್ (IAS) ಹುದ್ದೆಯಿಂದ ವಜಾಗೊಂಡಿರುವ ಪೂಜಾ ಖೇಡ್ಕರ್ (Puja Khedkar) ಅವರನ್ನು ಆ.21 ವರೆಗೂ ಬಂಧಿಸದಂತೆ ದೆಹಲಿ ಹೈಕೋರ್ಟ್ (Delhi High Court) ಪೊಲೀಸರಿಗೆ ನಿರ್ದೇಶನ ನೀಡಿದೆ. ನಿರೀಕ್ಷಣಾ ಜಾಮೀನು ಕೋರಿ ಪೂಜಾ ಖೇಡ್ಕರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಸುಬ್ರಮಣ್ಯ ಪ್ರಸಾದ್ ಈ ಆದೇಶ ಹೊರಡಿಸಿದ್ದಾರೆ.
ವಿಚಾರಣೆ ವೇಳೆ ಆಕೆಯ ತಕ್ಷಣದ ಕಸ್ಟಡಿ ಅಗತ್ಯವಿದೆ ಎಂದು ತೋರುತ್ತಿಲ್ಲ. ಅದಕ್ಕಾಗಿ ಈಗಲೇ ಬಂಧನದ ಅಗತ್ಯವಿಲ್ಲ. ನಡೆಯುತ್ತಿರುವ ತನಿಖೆಗೆ ಅವರು ಸಹಕರಿಸಲಿ. ಯುಪಿಎಸ್‍ಸಿಯನ್ನು (UPSC) ಪ್ರಕರಣದಲ್ಲಿ ಕಕ್ಷಿ ಮಾಡಿ ಆಕೆಯ ಮಧ್ಯಂತರ ಜಾಮೀನು ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಆಯೋಗ ಮತ್ತು ದೆಹಲಿ ಪೊಲೀಸರಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
2023ರ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿರುವ ಖೇಡ್ಕರ್, ಅವರ ಹೆಸರು, ಆಕೆಯ ತಂದೆ ಮತ್ತು ತಾಯಿಯ ಹೆಸರುಗಳು, ಅವರ ಭಾವಚಿತ್ರ, ಸಹಿ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಬದಲಾಯಿಸುವ ಮೂಲಕ ಅವರ ಗುರುತನ್ನು ನಕಲಿ ಮಾಡಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಆ.1 ರಂದು ದೆಹಲಿ ಸೆಷನ್ ನ್ಯಾಯಾಲಯವು ಖೇಡ್ಕರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಖೇಡ್ಕರ್ ಅವರ ಕ್ರಮಗಳು ಯುಪಿಎಸ್‍ಸಿಗೆ ವಂಚನೆ ಮಾಡಿದ್ದು ಮಾತ್ರವಲ್ಲದೆ ಅರ್ಹ ಅಭ್ಯರ್ಥಿಗಳು ಅವರ ಸರಿಯಾದ ಅವಕಾಶಗಳಿಂದ ವಂಚಿತರಾಗಿದ್ದಾರೆ ಎಂದು ಸೆಷನ್ಸ್ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.