ಬೆಂಗಳೂರು: ಹೈಕೋರ್ಟ್ ಆದೇಶದಂತೆ ದಂಡುಪಾಳ್ಯ ಗ್ಯಾಂಗ್ ನ ಅಪರಾಧ ಕೃತ್ಯಗಳ ಕುರಿತು ಮರುವಿಚಾರಣೆಯನ್ನು ನಡೆಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 34ನೇ ವಿಶೇಷ ಸತ್ರನ್ಯಾಯಾಲಯ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.
ಈ ಪ್ರಕರಣದಲ್ಲಿ ಈ ಹಿಂದೆಯೇ ಕೆಳಹಂತದ ನ್ಯಾಯಾಲಯ 14 ವರ್ಷಗಳ ಶಿಕ್ಷೆ ಪ್ರಕಟಿಸಿತ್ತು. ಈ ಆದೇಶದ ವಿರುದ್ಧ ದಂಡುಪಾಳ್ಯ ಗ್ಯಾಂಗ್ ಶಿಕ್ಷೆ ರದ್ದುಪಡಿಸಿ ಮರುವಿಚಾರಣೆ ನಡೆಸುವಂತೆ ಹೈಕೋರ್ಟ್ ಮೊರೆಹೋಗಿದ್ದರು. ಕಳೆದ 17 ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದೇವೆ. ಮಕ್ಕಳು ದೊಡ್ಡವರಾಗಿದ್ದಾರೆ. ನಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲವೆಂದು ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಅದರಂತೆ ಹೈಕೋರ್ಟ್ ಕೆಳ ನ್ಯಾಯಾಲಯದ ಶಿಕ್ಷೆ ರದ್ದುಪಡಿಸಿ, 3 ತಿಂಗಳ ಒಳಗೆ ಮರುವಿಚಾರಣೆ ನಡೆಸಿ ತೀರ್ಪು ನೀಡುವಂತೆ ಆದೇಶಿಸಿತ್ತು.
Advertisement
ಅದರಂತೆ ಕಳೆದ ಮೂರು ತಿಂಗಳಿಂದ ಮರುವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶಿವನಗೌಡರು, ಸರ್ಕಾರದ ಪರ ವಕೀಲರಾದ ಬಿ.ಎಸ್.ಪಾಟೀಲ ಅವರು ಸಲ್ಲಿಸಿದ 15 ಜನರ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಅಂತಿಮವಾಗಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5 ಸಾವಿರ ರೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದರು.
Advertisement
Advertisement
ದಂಡು ಪಾಳ್ಯ ಗ್ಯಾಂಗ್‍ನ ದೊಡ್ಡಹನುಮ, ಮುನಿಕೃಷ್ಣ, ವೆಂಕಟೇಶ, ನಲ್ಲ ತಿಮ್ಮ ಮತ್ತು ಲಕ್ಷ್ಮೀ ತಂಡ ಬೆಂಗಳೂರು ನಗರ ಹೊರವಲಯದ ಅಗ್ರಹಾರ ದಾಸರಹಳ್ಳಿಯ ಗೀತಾ ಎಂಬ ಒಂಟಿ ಮಹಿಳೆಯನ್ನು ಕೊಲೆ ಮಾಡಿ, ಮನೆಯಲ್ಲಿದ್ದ ನಗ-ನಾಣ್ಯ ದೋಚಿ ಪರಾರಿಯಾಗಿತ್ತು. ಅಲ್ಲದೇ ಈ ಗ್ಯಾಂಗ್ 2000 ದಶಕದಲ್ಲಿ ರಾಜ್ಯಾದ್ಯಂತ ಒಂಟಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಮತ್ತು ಸುಲಿಗೆಯಂತಹ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿತ್ತು. ಅಲ್ಲದೆ ಅಪರಾಧಿಗಳ ತಂಡ ಒಟ್ಟು 88 ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳಿರುವುದರಿಂದ ಇವರಿಗೆ ಮರಣದಂಡನೆ ನೀಡಬೇಕೆಂದು ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು.
Advertisement
ಸತತ ಮೂರು ದಶಕಗಳ ಕಾಲ ಇಡೀ ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದ್ದ ಈ ತಂಡ ಪೊಲೀಸ್ ಇಲಾಖೆಯ ನಿದ್ದೆಗೆಡಿಸಿತ್ತು. ಅಲ್ಲದೇ ಬರೋಬ್ಬರಿ 88 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆ ಪಾತಕಿಗಳ ಭಾವಚಿತ್ರಗಳು ಸಹ ಇದೇ ಮೊದಲ ಬಾರಿಗೆ ನೀಡಲಾಗಿದೆ.
ಯಾವ ಪ್ರಕರಣಕ್ಕೆ ತೀರ್ಪು: 2000 ಇಸವಿಯ ನವೆಂಬರ್ 02 ರಂದು ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿಯಲ್ಲಿ ಕುಡಿಯುವ ನೀರಿನ ನೆಪದಲ್ಲಿ ಗೀತಾ ಎಂಬವರ ಮನೆಗೆ ಹೋಗುವ ಪಾತಕಿ ಲಕ್ಷ್ಮೀ, ಮನೆಯಲ್ಲಿ ಒಂಟಿ ಮಹಿಳೆಯಿರುವುದನ್ನು ಖಾತ್ರಿಪಡಿಸಿಕೊಂಡಿದ್ದಳು. ಲಕ್ಷ್ಮೀ ಹಿಂದೆಯೇ ದೊಡ್ಡ ಹನುಮ, ವೆಂಕಟೇಶ, ಮುನಿಕೃಷ್ಣ ಮತ್ತು ನಲ್ಲತಿಮ್ಮ ಬಂದು ಪ್ರಾಣಿಗಳಂತೆ ಗೀತಾರನ್ನು ಚಾಕುವಿನಿಂದ ಕ್ರೂರವಾಗಿ ಕುತ್ತಿಗೆ ಕುಯ್ದು ಹೊಟ್ಟೆಗೆ ತಿವಿದು ಮೈ ಮೇಲಿದ್ದ ಮಾಂಗಲ್ಯಸರ, ಜುಮುಕಿ, ಮಾಟಿ ಮತ್ತು ಮನೆಯಲ್ಲಿದ್ದ ಬೆಲೆಬಾಳುವ ಸೀರೆ ಮತ್ತು ಇನ್ನಷ್ಟು ಒಡವೆಗಳನ್ನು ದೊಚಿ ಪರಾರಿಯಾಗಿದ್ದರು.
ಸೆರೆಯಾಗಿದ್ದು ಹೇಗೆ: ಅಪರಾಧಿಗಳು ತಾವು ದೋಚಿದ್ದ ವಸ್ತುಗಳನ್ನು ನಗರದ ಅವೆನ್ಯೂ ರಸ್ತೆಯ ರಾಜಮಾರುಕಟ್ಟೆಯ ಸತ್ಯನಾರಾಯಣ ಜ್ಯುವೆಲರಿ ಶಾಪ್ ನಲ್ಲಿ ಮಾರಾಟ ಮಾಡಿದ್ದರು. ಪೊಲೀಸರ ವಿಚಾರಣೆ ವೇಳೆ ಈ ಅಂಶ ಬೆಳಕಿಗೆ ಬಂದಿತ್ತು. ಅಲ್ಲದೇ ಪೊಲೀಸರು ಬಂಗಾರದ ಅಂಗಡಿಯ ಮಾಲೀಕನ ಸಾಕ್ಷಿಯನ್ನು ಕೋರ್ಟ್‍ಗೆ ಸಲ್ಲಿಸಿದ್ದರು. ಬಂಗಾರದ ಅಂಗಡಿಯ ಮಾಲೀಕನ ಸಾಕ್ಷಿಯೇ ಈ ಪ್ರಕರಣಕ್ಕೆ ದೊಡ್ಡ ಅಡಿಪಾಯವಾಯಿತು. ಇನ್ನುಳಿದಂತೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ 15 ಜನರ ಸಾಕ್ಷಿಗಳನ್ನು ಕೋರ್ಟ್ ಮುಂದೆ ಪ್ರಸ್ತುತ ಪಡಿಸಲಾಗಿತ್ತು.
ರಾಜ್ಯದಲ್ಲಿನ ಒಂಟಿ ಮಹಿಳೆಯರ ಪಾಲಿಗೆ ಯಮಕಿಂಕರರಾಗಿದ್ದ ಈ ಪಾತಕಿಗಳ ಬಗ್ಗೆ ಚಲನಚಿತ್ರ ನಿರ್ಮಾಣವಾದಾಗ ರಾಜ್ಯದ ಜನತೆ ಈ ದೊಡ್ಡ ಹನುಮ ಹಾಗೂ ಇವನ ಎಲ್ಲಾ ಕೃತ್ಯಗಳಲ್ಲೂ ಭಾಗಿಯಾಗಿದ್ದ ಲಕ್ಷ್ಮೀ, ವೆಂಕಟೇಶ, ಮುನಿಕೃಷ್ಣ ಮತ್ತು ನಲ್ಲತಿಮ್ಮನ ಪಾತ್ರಗಳನ್ನು ನಿರ್ವಹಿಸಿದ್ದ ಚಿತ್ರ ನಟರನ್ನು ನೋಡಿ, ಅಸಲೀ ದಂಡುಪಾಳ್ಯದ ಗ್ಯಾಂಗ್ ನೋಡಲು ಇಡೀ ರಾಜ್ಯದ ಜನತೆ ಕಾದು ಕುಳಿತಿದ್ದರು. ಪರಪ್ಪನ ಅಗ್ರಹಾರದ ನ್ಯಾಯಾಲಯಕ್ಕೆ ಬೆಳಗಾವಿಯ ಹಿಂಡಲಗಾದಿಂದ ಬಂದಿದ್ದ ಈ ಪಾತಕಿಗಳನ್ನು ನೋಡಿ ಬೆಂಗಳೂರಿನ ಸಜಾ ಬಂಧಿಗಳು ಬೆಚ್ಚಿದ್ದರು.