ನವದೆಹಲಿ: ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾ.ಯಶವಂತ್ ವರ್ಮಾ (Justice Yashwant Varma) ಅವರ ಮನೆಯಲ್ಲಿ ಕಂತೆ ಕಂತೆ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ನೇಮಿಸಿದ್ದ ಸಮಿತಿಯು ಸಿಜೆಐ ಸಂಜೀವ್ ಖನ್ನಾ (CJI Sanjiv Khanna) ಅವರಿಗೆ ತನಿಖಾ ವರದಿಯನ್ನು ಸಲ್ಲಿಸಿದೆ.
ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಶೀಲ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಿ.ಎಸ್. ಸಂಧವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಅನು ಶಿವರಾಮನ್ ಇದ್ದರು. ಸಮಿತಿಯು ಮೇ 3 ರಂದು ತನ್ನ ವರದಿಯನ್ನು ಪೂರ್ಣಗೊಳಿಸಿತ್ತು. ಇದೀಗ ಸುಪ್ರೀಂ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಕೆಯಾಗಿದೆ. ಇದನ್ನೂ ಓದಿ: ಜಡ್ಜ್ ಬಂಗ್ಲೆಯಲ್ಲಿ ಕಂತೆ ಕಂತೆ ನಗದು ಪತ್ತೆ ಕೇಸ್ – ಸುಪ್ರೀಂ ಕೋರ್ಟ್ ಸಮಿತಿಯಿಂದ ತನಿಖೆ ಆರಂಭ
ಮಾರ್ಚ್ 14 ರಂದು ನ್ಯಾಯಮೂರ್ತಿ ವರ್ಮಾ ಅವರ ದೆಹಲಿಯ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹೋದಾಗ ಸುಟ್ಟ ಸ್ಥಿತಿಯಲ್ಲಿ ಕಂತೆ ಕಂತೆ ನಗದು ಪತ್ತೆಯಾಗಿದೆ ಎನ್ನಲಾಗಿತ್ತು. ಈ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಮೂವರು ನ್ಯಾಯಾಧೀಶರ ಸಮಿತಿಯನ್ನು ನೇಮಿಸಿತ್ತು.
ನಗದು ಪತ್ತೆಯಾದ ಬಗ್ಗೆ ವರದಿಯ ನಂತರ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರು ಪ್ರಾಥಮಿಕ ವಿಚಾರಣೆ ನಡೆಸಿದ್ದರು. ಬಳಿಕ ನ್ಯಾಯಮೂರ್ತಿ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಈ ವೇಳೆ ನಗದು ಪತ್ತೆಯಾದ ಆರೋಪಕ್ಕೆ ಅವರನ್ನು ವರ್ಗಾಯಿಸಲಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟನೆ ನೀಡಿತ್ತು.
ಮಾ.28 ರಂದು ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ, ನ್ಯಾ.ವರ್ಮಾ ಅವರನ್ನು ಯಾವುದೇ ನ್ಯಾಯಾಂಗದ ಕೆಲಸಕ್ಕೆ ನಿಯೋಜಿಸದಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.
ಇದೆಲ್ಲದರ ನಡುವೆ ನ್ಯಾ.ವರ್ಮಾ ಅವರು ಆರೋಪಗಳನ್ನು ನಿರಾಕರಿಸಿದ್ದರು. ತಾವಾಗಲಿ, ತಮ್ಮ ಕುಟುಂಬದ ಸದಸ್ಯರಾಗಲಿ ಆ ಕೊಠಡಿಯಲ್ಲಿ ಹಣವನ್ನು ಇಟ್ಟಿರಲಿಲ್ಲ ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ: ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಜಡ್ಜ್‌ಗಳ ಆಸ್ತಿ ವಿವರ ಬಹಿರಂಗ – ವೆಬ್‍ಸೈಟ್‌ಲ್ಲಿ ಮಾಹಿತಿ ಅಪ್ಲೋಡ್‍ಗೆ ನಿರ್ಧಾರ