ಚಿಕ್ಕಬಳ್ಳಾಪುರ: ನಿಮ್ಮ ಜಮೀನು ಬಾಡಿಗೆಗೆ ಕೊಡಿ ಟವರ್ ನಿರ್ಮಾಣ ಮಾಡುತ್ತೇವೆ. ಅಡ್ವಾನ್ಸ್ ಅಂತ ಲಕ್ಷ ಲಕ್ಷ ಕೊಡ್ತೀವಿ, ತಿಂಗಳಿಗೆ ಸಾವಿರಾರು ರೂಪಾಯಿ ಬಾಡಿಗೆ ಸಮೇತ ನಿಮ್ಮ ಮನೆಯಲ್ಲಿ ಒಬ್ಬರಿಗೆ ಕೆಲಸ ಸಹ ಕೊಡುತ್ತೇವೆ ಎಂದು ದಂಪತಿಯನ್ನು ಪುಸಲಾಯಿಸಿ, ಲಕ್ಷಾಂತರ ರೂಪಾಯಿ ಪೀಕಿದ್ದಾರೆ.
ಜಿಲ್ಲೆಯ ಗೌರಿಬಿದನೂರು ತಾಲೂಕಿನ ಬೆಳಚಿಕ್ಕನಹಳ್ಳಿ ಗ್ರಾಮದ ವೆಂಕಟೇಶ್ ರೆಡ್ಡಿ ಹಾಗೂ ಜ್ಯೋತಿ ರೆಡ್ಡಿ ದಂಪತಿ ಮನೆಗೆ ಬಂದ ಖದೀಮರು ನಿಮ್ಮ ಮನೆ ಬಳಿಯ ಜಮೀನು ಕೊಡಿ. ನಾವು ಟೆಲಿನರ್ ಕಂಪನಿ ಟವರ್ ನಿರ್ಮಾಣ ಮಾಡಬೇಕಿದೆ. 22.50 ಲಕ್ಷ ರೂ. ಮುಂಗಡ ಹಣ ಪಾವತಿಸುತ್ತೇವೆ. ಅಲ್ಲದೆ ತಿಂಗಳಿಗೆ 28 ಸಾವಿರ ರೂ. ಬಾಡಿಗೆ ಜೊತೆಗೆ ಟವರ್ ನೋಡಿಕೊಳ್ಳಲು ನಿಮ್ಮ ಮನೆಯವರನ್ನೇ ನೇಮಿಸಿ, ಪ್ರತಿ ತಿಂಗಳು 16,000 ರೂ. ಸಂಬಳ ಕೊಡುತ್ತೇವೆ ಎಂದು ಆಸೆ ತೋರಿಸಿದ್ದಾರೆ.
Advertisement
Advertisement
ವಂಚಕರ ಮಾತನ್ನು ದಂಪತಿ ನಂಬಿದ್ದಾರೆ. ಆಗ ಖದೀಮರು ರಿಜಿಸ್ಟ್ರೇಷನ್ ಫೀ ಅಂತ ಅವರಿಂದ 6,100 ರೂ. ಪಡೆದುಕೊಂಡಿದ್ದಾರೆ. ನಂತರ ಹೀಗೆ ಮುಂದುವರಿದು ಆಫೀಸು ನಿರ್ಮಾಣ ಹಾಗೆ ಹೀಗೆ ಕಥೆ ಹೇಳಿ ನಂಬಿಸಿ 2,96,485 ರೂ.ಗಳನ್ನು ವಂಚಕರು ತಮ್ಮ ಖಾತೆಗಳಿಗೆ ಹಾಕಿಸಿಕೊಂಡಿದ್ದಾರೆ. ನಂತರ ವಂಚಕರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಕರೆ ಸ್ವೀಕರಿಸದ್ದರಿಂದ ದಂಪತಿಗೆ ವಂಚನೆಗೊಳಗಾಗಿರುವುದು ಅರಿವಾಗಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರದ ಡಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಂಚಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.