ಮದ್ವೆಯಾದ ಕೆಲವೇ ಕ್ಷಣದಲ್ಲಿ ಪ್ರಾಣಬಿಟ್ಟ ನವದಂಪತಿ

Public TV
1 Min Read
marriage 2

-ನವಜೋಡಿಯ ಕನಸಿಗೆ ಕೊಳ್ಳಿಯಿಟ್ಟ ಅಪಘಾತ

ವಾಷಿಂಗ್ಟನ್: ಆಗಷ್ಟೇ ಮದುವೆ ಮಾಡಿಕೊಂಡು ಚರ್ಚ್ ನಿಂದ ಹೊರ ಬರುತ್ತಿದ್ದ ನವದಂಪತಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ ದುರಂತ ಯುಎಸ್‍ನ ಟೆಕ್ಸಾಸ್‍ನಲ್ಲಿ ನಡೆದಿದೆ.

ಹಾರ್ಲೇ(19) ಮತ್ತು ರಿಯಾನನ್ ಮೋರ್ಗನ್(20) ಮೃತ ದುರ್ದೈವಿಗಳು. ಹಾರ್ಲೇ ಹಾಗೂ ರಿಯಾನನ್ ಪ್ರೀತಿಸಿ ಮದುವೆಯಾಗಿದ್ದರು. ಟೆಕ್ಸಾಸ್‍ನ ಜಾಯ್ ಡುಬೋಸ್-ಸಿಮಂಟನ್ ಬಳಿಯ ಜಸ್ಟಿಸ್ ಆಫ್ ಪೀಸ್‍ನ ಚೆಂಬರ್ ಹತ್ತಿರ ಈ ಅಪಘಾತ ಸಂಭವಿಸಿದೆ. ಲಾರಿ ಚಾಲಕನ ಅಜಾಗರೂಕತೆಗೆ ಹೊಸ ಜೀವನ ಆರಂಭಿಸಬೇಕಿದ್ದ ದಂಪತಿ ಮಸಣ ಸೇರಿದ್ದಾರೆ.

ಶುಕ್ರವಾರದಂದು ಅದ್ಧೂರಿಯಾಗಿ ಕಾರ್ಲೇ ಮತ್ತು ರಿಯಾನನ್ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಆದರೆ ಈ ಖುಷಿ ಬಹಳ ಹೊತ್ತು ಉಳಿಯಲಿಲ್ಲ. ಕೋರ್ಟ್‌ಹೌಸ್‌ನಲ್ಲಿ ತಮ್ಮ ಮದುವೆ ಪರವಾನಗಿಯನ್ನು ಸಲ್ಲಿಸಲು ಹಾಗೂ ರಿಯಾನಾನ್‍ನ ಹೆಸರನ್ನು ಕಾನೂನಿನ ಪ್ರಕಾರ ಬದಲಾಯಿಸಲು ನವ ವಧು-ವರ ಕಾರಿನ ಬಳಿ ಬರುತ್ತಿದ್ದರು. ಜೊತೆಗೆ ಹೊರಗಡೆ ಮದುವೆಯ ಸಂತೋಷ ಕ್ಷಣದ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ದಂಪತಿ ಸಜ್ಜಾಗಿದ್ದರು. ಆದರೆ ಈ ವೇಳೆ ರಸ್ತೆಯಲ್ಲಿ ವೇಗದಿಂದ ಬಂದ ಲಾರಿ ಅವರಿಬ್ಬರಿಗೂ ಡಿಕ್ಕಿ ಹೊಡೆದಿದೆ.

marriage 1 2

ಪರಿಣಾಮ ಇಬ್ಬರೂ ತಮ್ಮ ದಾಂಪತ್ಯ ಜೀವನ ಆರಂಭಿಸುವ ಮೊದಲೇ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಎದುರಲ್ಲೇ ಈ ದುರ್ಘಟನೆ ಸಂಭವಿಸಿದರೂ ನವದಂಪತಿಯ ಜೀವ ಉಳಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಮೋರ್ಗನ್ ತಾಯಿ ಪ್ರತಿಕ್ರಿಯಿಸಿ, ನಮ್ಮ ಕಣ್ಣೆದುರೇ ನಮ್ಮ ಮಕ್ಕಳು ಅಪಘಾತಕ್ಕೀಡಾದರು. ಆದರೆ ಅವರನ್ನು ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಲಿಲ್ಲ. ಅವರ ರಕ್ತದ ಕಲೆಗಳು ಇನ್ನೂ ನಮ್ಮ ಅಂಗೈ ಮೇಲಿದೆ. ಇಬ್ಬರೂ ಸಾಕಷ್ಟು ಕನಸು ಕಟ್ಟಿಕೊಂಡು ವಿವಾಹವಾಗಿದ್ದರು. ಆದರೆ ಅವರ ಖುಷಿಯ ಕ್ಷಣ ಈ ಅಪಘಾಯದಿಂದ ದುರಂತ ಕ್ಷಣವಾಯಿತು. ನಮ್ಮ ಮಕ್ಕಳ ಸಾವನ್ನು ನಾವೇ ನೋಡುವ ಸ್ಥಿತಿ ಬಂತು ಎಂದು ಕಣ್ಣೀರಿಟ್ಟಿದ್ದಾರೆ.

ಸದ್ಯ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಆರೋಪಿ ಲಾರಿ ಚಾಲಕನನ್ನು ಪತ್ತೆ ಮಾಡುತ್ತೇವೆ, ಆದಷ್ಟು ಬೇಗ ಆತನನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *