Connect with us

Latest

ಐಎಎಸ್ ಅಧಿಕಾರಿಯಿಂದ 7 ಕೋಟಿ ರೂ. ಸುಲಿಗೆ ಮಾಡಲೆತ್ನಿಸಿದ ದಂಪತಿ ಬಂಧನ

Published

on

ಥಾಣೆ: ಮಹಾರಾಷ್ಟ್ರದ ಹಿರಿಯ ಐಎಎಸ್ ಅಧಿಕಾರಿಯೊಬ್ಬರಿಂದ 7 ಕೋಟಿ ರೂ. ಸುಲಿಗೆ ಮಾಡಲು ಯತ್ನಿಸಿದ ಖಾಸಗಿ ಡಿಟೆಕ್ಟಿವ್ ಹಾಗೂ ಆತನ ಪತ್ನಿಯನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ.

ಅಮಾನತುಗೊಂಡಿರೋ ಅಧಿಕಾರಿ ರಾಧೆಶ್ಯಾಮ್ ಮೊಪಾಲ್ವರ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಹಿಂತೆಗೆದುಕೊಳ್ಳಲು ಆರೋಪಿ ಸತೀಶ್ ಮಂಗ್ಲೆ ಬರೋಬ್ಬರಿ 7 ಕೋಟಿ ರೂ. ಗೆ ಡಿಮ್ಯಾಂಡ್ ಮಾಡಿದ್ದ. ಹಣ ಕೊಡದಿದ್ದರೆ ಫೋನ್ ಸಂಭಾಷಣೆಯ ಆಡಿಯೋ ಲೀಕ್ ಮಾಡುವುದಾಗಿ ಬೆದರಿಸಿದ್ದ ಎಂದು ವರದಿಯಾಗಿದೆ.

ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಾಧೇಶ್ಯಾಮ್ ಅವರನ್ನು ಆಗಸ್ಟ್ ನಲ್ಲಿ ಸಿಎಂ ದೇವೇಂದ್ರ ಫಡ್ನಾವಿಸ್ ಹುದ್ದೆಯಿಂದ ತೆಗೆದುಹಾಕಿದ್ದರು. ಸತೀಶ್ ಲೀಕ್ ಮಾಡಿದ್ದ ಆಡಿಯೋದ ಫಲವಾಗಿ ರಾಧೇಶ್ಯಾಮ್ ಅಮಾನತುಗೊಂಡಿದ್ದರು. ಆಡಿಯೋದಲ್ಲಿ ಅಧಿಕಾರಿ ಡೀಲ್‍ವೊಂದರ ಬಗ್ಗೆ ಮಾತನಾಡುತ್ತಿದ್ದರು ಎಂದು ವರದಿಯಾಗಿದೆ.

ಶುಕ್ರವಾರದಂದು ಖಾಸಗಿ ಡಿಟೆಕ್ಟೀವ್ ಸತೀಶ್ ಹಾಗೂ ಆತನ ಪತ್ನಿ ಶ್ರದ್ಧಾಳನ್ನು ದೊಂಬಿಲ್ವಿ ಮನೆಯಿಂದ ಎಇಸಿ(ಆ್ಯಂಟಿ ಎಕ್ಸ್ಟಾರ್ಷನ್ ಸೆಲ್) ಅಧಿಕಾರಿಗಳು ಬಂಧಿಸಿದ್ದಾರೆ. ಸತೀಶ್ ಮನೆಯಿಂದ ಪೊಲೀಸರು 2 ಲ್ಯಾಪ್‍ಟಾಪ್, 5 ಮೊಬೈಲ್‍ಗಳು, 4 ಪೆನ್‍ಡ್ರೈವ್, 15 ಸಿಡಿ ಹಾಗೂ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಥಾಣೆ ಪೊಲೀಸ್ ವರಿಷ್ಠಾಧಿಕಾರಿ ಪರಂ ಬೀರ್ ಹೇಳಿದ್ದಾರೆ.

ರಾಧೇಶ್ಯಾಮ್ ಅವರು ಸತೀಶ್ ನಿಂದ ಬೆದರಿಕೆ ಕರೆ ಬರುತ್ತಿದೆ ಎಂದು ಪೊಲೀಸರ ಮೊರೆ ಹೋಗಿದ್ದರು. ಸತೀಶ್ ತನ್ನ ಪತ್ನಿ ಹಾಗೂ ಗೆಳೆಯ ಅನಿಲ್ ವೇದ್ ಮೆಹ್ತಾ ಜೊತೆ ಅಧಿಕಾರಿಯನ್ನ ಸಂಪರ್ಕಿಸಿ ಅಕ್ಟೋಬರ್ 23ರಂದು ಹಣದ ಸಮೇತ ನಾಸಿಕ್ ಹೆದ್ದಾರಿಯ ಕರೇಗಾಂವ್ ಟೋಲ್ ಪ್ಲಾಜಾ ಬಳಿ ಬರುವಂತೆ ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಿಮ್ಮ ಕುಟುಂಬಸ್ಥರು ಸುರಕ್ಷಿತವಾಗಿರಬೇಕಾದ್ರೆ 7 ಕೋಟಿ ರೂ. ಹಣ ಕೊಡ್ಬೇಕು ಅಂತ ದಂಪತಿ ಅಧಿಕಾರಿಯನ್ನ ಬೆದರಿಸಿದ್ದರು. ಆದ್ರೆ ಐಎಎಸ್ ಅಧಿಕಾರಿ ಆ ಫೋನ್ ಸಂಭಾಷಣೆಯನ್ನ ಥಾಣೆ ಪೊಲೀಸರಿಗೆ ಒದಗಿಸಿದ್ದರು. ನಂತರ ಪೊಲೀಸರು ಸತೀಶ್ ಮತ್ತು ಆತನ ಪತ್ನಿಯನ್ನ ಬಂಧಿಸಲು ಪ್ಲ್ಯಾನ್ ರೂಪಿಸಿದ್ದರು. ಪೊಲೀಸ್ ಪೇದೆಯೊಬ್ಬರು ಬೇರೆ ವೇಷದಲ್ಲಿ 1 ಕೋಟಿ ರೂ. ತೆಗೆದುಕೊಂಡು ಸತೀಶ್ ಮನೆಗೆ ಹೋಗಿ ರೆಡ್ ಹ್ಯಾಂಡ್ ಆಗಿ ಆರೋಪಿಯನ್ನ ಹಿಡಿದಿದ್ದಾರೆ.

ಸತೀಶ್ ಈ ಹಿಂದೆ ರಾಧೇಶ್ಯಾಮ್ ಅವರ ಫೋನ್ ಸಂಭಾಷಣೆಯನ್ನ ಮಾಧ್ಯಮಗಳಿಗೆ ಲೀಕ್ ಮಾಡಿ, ರಾಜ್ಯದ ಆಡಳಿತದಲ್ಲಿ ಲಂಚ ಕೊಡದಿದ್ದರೆ ಕೆಲಸ ಆಗಲ್ಲ ಎಂದು ಆರೋಪ ಮಾಡಿದ್ದ. ಮೊದಲಿಗೆ ಫೋನ್ ಸಂಭಾಷಣೆಯ ಆಡಿಯೋವನ್ನ ಹಿಂದಿರುಗಿಸಲು 10 ಕೋಟಿಗೆ ಡಿಮ್ಯಾಂಡ್ ಮಾಡಿ, ರಾಧಶ್ಯಾಮ್ ಹಣ ಕೊಡಲು ನಿರಾಕರಿಸಿದ ನಂತರ 7 ಕೋಟಿಗೆ ಬೇಡಿಕೆ ಇಟ್ಟಿದ್ದ ಎಂದು ವರದಿಯಾಗಿದೆ.

 

Click to comment

Leave a Reply

Your email address will not be published. Required fields are marked *