Connect with us

225 ನಿದ್ದೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು – ಪ್ರಿಯಕರ ಸಾವು

225 ನಿದ್ದೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು – ಪ್ರಿಯಕರ ಸಾವು

ಚೆನ್ನೈ: ಮದುವೆಗೆ ಪೋಷಕರು ವಿರೋಧಿಸಿದ್ದಕ್ಕೆ ಪ್ರೇಮಿಗಳು ಸುಮಾರು 225 ನಿದ್ದೆ ಮಾತ್ರೆಗಳನ್ನು ಸೇವಿಸಿದ ಪರಿಣಾಮ ಪ್ರಿಯಕರ ಸಾವನ್ನಪ್ಪಿರೋ ಘಟನೆ ಚೆನ್ನೈನಲ್ಲಿ ನಡೆದಿದೆ.

ಶೋಲಿಂಗನಲ್ಲೂರಿನ 30 ವರ್ಷದ ಶಿವಗುರುನಾಥನ್ ಹಾಗೂ ಪೆರಂಬೂರಿನ 23 ವರ್ಷದ ಚಿತ್ರ ಇಲ್ಲಿನ ಮಾಮಲ್ಲಾಪುರಂನ ರೆಸಾರ್ಟ್‍ವೊಂದಕ್ಕೆ ಹೋಗಿದ್ದರು. ನಂತರ ಈ ಜೋಡಿ ರೂಮಿನಿಂದ ಹೊರಬರದ ಕಾರಣ ಸೋಮವಾರ ಮಧ್ಯಾಹ್ನ ರೆಸಾರ್ಟ್ ಸಿಬ್ಬಂದಿಗೆ ಅನುಮಾನ ಬಂದಿತ್ತು. ಈ ಹಿನ್ನೆಲೆಯಲ್ಲಿ ರೂಮಿನ ಬಾಗಿಲನ್ನ ಬಡಿಯುತ್ತಲೇ ಇದ್ದರು. ಚಿತ್ರ ಹೇಗೋ ರೂಮಿನ ಬಾಗಿಲನ್ನ ಕಷ್ಟಪಟ್ಟು ತೆಗೆದಿದ್ದಾರೆ. ನಂತರ, “ನಾನು ಮತ್ತು ಶಿವಗುರುನಾಥನ್ ಪ್ರೇಮಿಗಳು. ನಾವು ಆತ್ಮಹತ್ಯೆ ಮಾಡಿಕೊಳ್ಳಲು ನಿದ್ದೆ ಮಾತ್ರೆ ಸೇವಿಸಿದ್ದೇವೆ” ಎಂದು ಹೇಳಿ ಬಳಿಕ ಪ್ರಜ್ಞೆ ತಪ್ಪಿದ್ದರು.

ಶಿವಗುರುನಾಥನ್‍ರನ್ನು ಮಾಮಲ್ಲಾಪುರಂನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿರೋದಾಗಿ ವೈದ್ಯರು ಹೇಳಿದ್ದರು. ಇನ್ನು ಚಿತ್ರಾ ಅವರನ್ನ ಚೆಂಗಲ್‍ಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಮಲ್ಲಾಪುರ ಪೊಲೀಸರು ಪ್ರೇಮಿಗಳಿದ್ದ ರೂಮಿನಿಂದ ಡೆತ್‍ನೋಟ್ ವಶಪಡಿಸಿಕೊಂಡಿದ್ದಾರೆ. ಯುವತಿಯ ಪೋಷಕರು ಮದುವೆಗೆ ವಿರೋಧಿಸಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ. ಅಲ್ಲದೆ ಕನಿಷ್ಠ 225 ನಿದ್ದೆ ಮಾತ್ರೆಗಳನ್ನ ಸೇವಿಸಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆಂದು ವರದಿಯಾಗಿದೆ.

ಶಿವಗುರುನಾಥನ್ ಹಾಗೂ ಚಿತ್ರ ಟಿ ನಗರ್‍ನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. 3 ವರ್ಷದಿಂದ ಪ್ರೀತಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಚಿತ್ರ ತನ್ನ ಪ್ರೀತಿಯ ಬಗ್ಗೆ ಪೋಷಕರಿಗೆ ಹೇಳಿದಾಗ ಶ್ರೀಗುರುನಾಥನ್ ಬೇರೆ ಸಮುದಾಯವರೆಂದು ಮದುವೆಗೆ ವಿರೋಧಿಸಿದ್ದರು. ಬಳಿಕ ಹೇಗೋ ಮನವೊಲಿಕೆಯಾಗಿ ಶ್ರೀಗುರುನಾಥನ್ ಅವರ ಜಾತಕ ಕೇಳಿದ್ದರು. ಜ್ಯೋತಿಷಿಗಳ ಬಳಿ ಜಾತಕ ತೋರಿಸಿದ ನಂತರ ಇಬ್ಬರ ಜಾತಕ ಕೂಡಿಬಂದಿಲ್ಲ ಎಂದು ಮದುವೆ ನಿರಾಕರಿಸಿದ್ದರು. ನಂತರ ಚಿತ್ರಾಗೆ ಬೇರೆ ವರನನ್ನು ಹುಡುಕುತ್ತಿದ್ದರು ಎಂದು ವರದಿಯಾಗಿದೆ.

Advertisement
Advertisement