ರಾಯ್ಪುರ: ಯುವ ಜೋಡಿಯೊಂದು ಸಾರ್ವಜನಿಕ ಶೌಚಾಲಯದಲ್ಲಿ ಮದುವೆ ಆಗಿರುವ ಘಟನೆ ಛತ್ತೀಸ್‍ಘಢ ರಾಜ್ಯದ ಬಿಸಲಾಪುರದಲ್ಲಿ ನಡೆದಿದೆ. ಸಾರ್ವಜನಿಕ ಶೌಚಾಲಯದಲ್ಲಿ ಮದುವೆ ಆಗುವ ಮೂಲಕ ಪ್ರತಿಯೊಬ್ಬರು ತಮ್ಮ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂಬ ಸಂದೇಶವನ್ನು ನವಜೋಡಿ ನೀಡಿದೆ.
ಶಬಾ ನವಾಜ್ ಮತ್ತು ಸರಫರಾಜ್ ಸಾರ್ವಜನಿಕ ಶೌಚಾಲಯದಲ್ಲಿ ಮದುವೆಯಾದ ಜೋಡಿ. 2017 ಮಾರ್ಚ್ ನಲ್ಲಿ ಶಬಾ ಮತ್ತು ಸರಫರಾಜ್ ಮದುವೆ ನಿರ್ಣಯವಾಗಿತ್ತು. ಆದ್ರೆ ಶಬಾ ಪತಿ ಮನೆಯಲ್ಲಿ ಶೌಚಾಲಯ ಕಟ್ಟಿಸಿದ್ರೆ ಮಾತ್ರ ಮದುವೆ ಆಗುತ್ತೇನೆ ಎಂದು ಷರತ್ತು ವಿಧಿಸಿದ್ದರು.
ಸರಫರಾಜ್ 2017 ಮೇ ನಲ್ಲಿ ಸರ್ಕಾರಕ್ಕೆ ಶೌಚಾಲಯ ನಿರ್ಮಾಣಕ್ಕಾಗಿ ಪಂಚಾಯತ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ ಬಳಿಕ ಸರ್ಕಾರದ ಸಹಾಯ ಧನದಿಂದ ಸರಫರಾಜ್ ಜೂನ್‍ನಲ್ಲಿಯೇ ಶೌಚಾಲಯ ನಿರ್ಮಿಸಿದ್ದರು.
ಸರಫರಾಜ್ ಬಾವಿ ಪತ್ನಿಗಾಗಿ ಶೌಚಾಲಯ ನಿರ್ಮಿಸಿದ ವಿಷಯ ಶಬಾ ಪೋಷಕರಿಗೆ ತಿಳಿದಿದೆ. ಎರಡು ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಇಬ್ಬರೂ ಜನವರಿ 21 ರಂದು ಮದುವೆ ಆಗಿದ್ದಾರೆ. ಜನವರಿ 24ರಂದು ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಶಬಾ ಮತ್ತು ಸರಫರಾಜ್ ಇಬ್ರೂ ಮತೊಮ್ಮೆ ನಗರದ ಸಾರ್ವಜನಿಕ ಶೌಚಾಲಯದಲ್ಲಿ ಮದುವೆ ಆಗಿದ್ದಾರೆ. ಪ್ರತಿ ಮನೆಯಲ್ಲಿ ಶೌಚಾಲಯವಿದ್ದರೆ ಯಾವುದೇ ರೋಗಗಳು ಬರುವುದಿಲ್ಲ. ಶೌಚಾಲಯ ನಿರ್ಮಾಣ ಮಾಡುವುದರಿಂದ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಪ್ರಕರಣಗಳು ಕಡಿಮೆ ಆಗಲಿವೆ ಎಂದು ನವದಂಪತಿ ಹೇಳಿದ್ದಾರೆ.