-ವಿಡಿಯೋ ತಲುಪವ ಮುನ್ನ ಲವ್ ಸ್ಟೋರಿಗೊಂದು ಟ್ವಿಸ್ಟ್
ಶಿವಮೊಗ್ಗ: ಫೇಸ್‍ಬುಕ್ ಮೂಲಕ ಪರಿಚಯವಾದ ಸ್ನೇಹ ಪ್ರೀತಿಗೆ ತಿರುಗಿ ಈಗ ಪರಸ್ಪರರು ಮೋಸದ ಆರೋಪ ಮಾಡುತ್ತಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಪ್ರೀತಿ ಮಾಡಿ ಮನೆ ಬಿಟ್ಟು ಹೋದ ಪ್ರೇಮಿಗಳು ಶಿವಮೊಗ್ಗದ ಪೊಲೀಸರಿಗೆ ವಾಟ್ಸಪ್ ಮೂಲಕ `ನಮ್ಮನ್ನು ಹುಡುಕಬೇಡಿ’ ಅಂತಾ ಮೆಸೇಜ್ ಕೂಡ ಮಾಡಿದ್ದರು. ಪ್ರೇಮಿಗಳ ವಾಟ್ಸಪ್ ವಿಡಿಯೋ ಪೊಲೀಸರಿಗೆ ತಲುಪುವ ಮುನ್ನವೇ ಈ ಪ್ರೇಮಿಗಳು ಪರಸ್ಪರ ದೂರು, ಮೋಸದ ಆರೋಪ ಮಾಡುತ್ತಿದ್ದಾರೆ.
ನಡೆದಿದ್ದೇನು?: ಶಿವಮೊಗ್ಗದ ಶೇಷಾದ್ರಿಪುರಂನ ಸೈಯ್ಯದ್ ಅಹ್ಮದ್ ಹಾಗೂ ಬಾಪೂಜಿ ನಗರದ ರೆಚೆಲ್ ಮಚಾಡೋ ಫೇಸ್ಬುಕ್ ಮೂಲಕ ಪರಿಚಯವಾಗಿತ್ತು. ಈ ಪರಿಚಯ ಪ್ರೀತಿಗೆ ಬದಲಾಗಿತ್ತು. ಭಿನ್ನ ಧರ್ಮೀಯರಾದ ಕಾರಣ ಎರಡೂ ಮನೆಯವರು ಒಪ್ಪಲಿಲ್ಲ. ಕೊನೆಗೆ ಇಬ್ಬರೂ ಕಳೆದ ವಾರ ಮನೆ ಬಿಟ್ಟು ಹೋಗಿದ್ದರು.
ಈ ಮಧ್ಯೆ ಹುಡುಗಿಯ ಪೋಷಕರು ಕೋಟೆ ಠಾಣೆಗೆ ನಾಪತ್ತೆ ದೂರು ಸಲ್ಲಿಸಿದರು. ಆದ್ರೆ ಇತ್ತ ಈ ಜೋಡಿ ಒಟ್ಟಿಗೆ ನಿಂತು ವೀಡಿಯೋ ಮಾಡಿ, ಅದನ್ನು ಸ್ನೇಹಿತರ ಮೂಲಕ ಪೊಲೀಸರಿಗೆ ತಲುಪಿಸುವ ಪ್ರಯತ್ನ ಮಾಡಿದ್ದರು. ಈ ನಡುವೆ ಇಬ್ಬರನ್ನೂ ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡುತ್ತಲೇ ಇದ್ದರು.
ಒಂದು ವಾರದ ನಂತರ ಬಂದ ಹುಡುಗಿ ಸೀದಾ ಕೋಟೆ ಠಾಣೆಗೆ ತೆರಳಿ, ಸೈಯ್ಯದ್ ನನ್ನನ್ನು ಕಿಡ್ನಾಪ್ ಮಾಡಿ, ಅಕ್ರಮವಾಗಿ ಭಟ್ಕಳದ ಲಾಡ್ಜ್ ನಲ್ಲಿ ಇಟ್ಟಿದ್ದ, ಇಸ್ಲಾಂಗೆ ಮತಾಂತರವಾಗು ಎಂದು ಒತ್ತಾಯ ಮಾಡಿದ್ದ ಎಂದು ದೂರು ನೀಡಿದ್ದಾರೆ. ಆದ್ರೆ ಸಯ್ಯದ್ ಅಹ್ಮದ್ ಮಾತ್ರ ಆಕೆಯೇ ಇಷ್ಟಪಟ್ಟು ಬಂದದ್ದು ಎನ್ನುತ್ತಿದ್ದಾನೆ. ಒಟ್ಟಿನಲ್ಲಿ ಇವರಿಬ್ಬರಲ್ಲಿ ಯಾರು ಸರಿ? ಯಾರು ತಪ್ಪು? ಎಂಬುದನ್ನು ಕೋಟೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.