ಸೂರತ್: ಉದ್ಯಮಿಯೊಬ್ಬ ಸಾಲಬಾಧೆ ತಾಳಲಾರದೇ ತನ್ನ ಪತ್ನಿ ಹಾಗೂ ಮಗುವಿನೊಂದಿಗೆ 12 ಅಂತಸ್ತಿನ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ್ದ ಘಟನೆ ಗುಜರಾತ್‍ನ ಸೂರತ್ ನಗರದ ಸರ್ತಾನಾದಲ್ಲಿ ನಡೆದಿದೆ.
ವಿಜಯ್ ವಘಸಿಯಾ (34), ಪತ್ನಿ ರೇಖಾ (30) ಹಾಘೂ ವಿನಯ್ (5) ಮೃತ ದುದೈವಿಗಳು. ಮೃತರು ಸರ್ತಾನಾದ ಬಿಆರ್ ಟಿಎಸ್‍ನ ಕೆನಲ್ ರಸ್ತೆಯಲ್ಲಿರುವ ಮೆಜಿಸ್ಟಿಕ ಟವರ್ ಬಳಿಯಿರುವ ಅಪಾರ್ಟ್ ಮೆಂಟ್‍ವೊಂದರಲ್ಲಿ ವಾಸವಾಗಿದ್ದರು. ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಆರಂಭದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ತನಿಖೆ ವೇಳೆ ಟೆರೇಸ್ ಬಾಗಿಲು ಬೀಗ ಹಾಕಿದ್ದರಿಂದ ಈ ಮೂವರು 12ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.
Advertisement
Advertisement
ಎಂದಿನಂತೆ ವಿಜಯ್ ತನ್ನ ಅಪಾರ್ಟ್‍ಮೆಂಟ್ ಸ್ನೇಹಿತ ಗೌರವ್ ಜೊತೆ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದಾರೆ. ಗೌರವ್ ಜೊತೆ ಮಾತನಾಡಿಕೊಂಡು ಹೋಗುವಾಗ ನೀರಿನ ಬಾಟಲಿ ತೆಗೆದುಕೊಂಡು ಹೋಗಲು ಮತ್ತೆ ಅಪಾರ್ಟ್‍ಮೆಂಟ್‍ಗೆ ಬಂದಿದ್ದಾರೆ. ಈ ಸಮಯದಲ್ಲೇ ಮೂವರು ಕಟ್ಟಡದ 12ನೇ ಅಂತಸ್ತಿನಿಂದ ಜಿಗಿದಿದ್ದಾರೆ.
Advertisement
Advertisement
ಈ ಘಟನೆ ನಡೆಯುತ್ತಿದ್ದಂತೆ ಗೌರವ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗ ವಿಜಯ್ ಜೇಬಿನಲ್ಲಿ ಡೆತ್‍ನೋಟ್ ಸಿಕ್ಕಿದೆ. ಆ ಡೆತ್‍ನೋಟ್ ವಿಜಯ್ ತನ್ನ ತಮ್ಮನಿಗಾಗಿ ಬರೆದಿದ್ದರು.
ಡೆತ್‍ನೋಟ್‍ನಲ್ಲಿ ಏನಿದೆ?: ವಿಜಯ್ ಆ ಡೆತ್‍ನೋಟ್‍ನನ್ನು ತನ್ನ ತಮ್ಮನಿಗಾಗಿ ಬರೆದಿದ್ದು, ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ, ನನ್ನ ಬಿಸಿನೆಸ್‍ನನ್ನು ನನ್ನ ತಮ್ಮನೇ ನೋಡಿಕೊಳ್ಳಬೇಕು. ಸಾಲಬಾಧೆ ತಾಳಲಾರದೇ ನಾನು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ವಿಜಯ್ ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ.
ಈ ಘಟನೆ ನಡೆದ ನಂತರ ಸೂರತ್ ನಗರ ಪೊಲೀಸ್ ಆಯುಕ್ತ ಸುದ್ದಿಗೋಷ್ಠಿ ನಡೆಸಿ ಯಾರೂ ಈ ರೀತಿ ಮಾಡಿಕೊಳ್ಳದಂತೆ ತಿಳಿಸಿದ್ದಾರೆ. ನಿಮಗೆ ಯಾವುದೇ ಸಮಸ್ಯೆ ಇದ್ದರೆ ‘ಜೀವನ್ ಆಸ್ತಾ’ ಆತ್ಮಹತ್ಯೆ ಸಹಾಯವಾಣಿಗೆ ಸಂಪರ್ಕಿಸಿ ಎಂದು ತಿಳಿಸಿದ್ದಾರೆ.
ಸದ್ಯ ಪೊಲೀಸರು ಈ ಕೇಸನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಿಜಯ್‍ಗೆ ಹಣ ನೀಡಿದವರು ತೊಂದರೆ ನೀಡಿದ್ದಾರಾ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.