ಬೀದರ್: ಅನ್ಯ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ನವದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಔರಾದ್ ತಾಲೂಕಿನ ಯನಗುಂದಾ ಗ್ರಾಮದಲ್ಲಿ ನಡೆದಿದೆ.
ಮಹೇಶ್ ಸಜ್ಜನ ಶೆಟ್ಟಿ (25) ಮತ್ತು ವಿಜಯಲಕ್ಷ್ಮಿ (22) ಮೃತ ದಂಪತಿ. ಇಬ್ಬರು ತಾವು ಮಲಗುವ ಕೋಣೆಯಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹೇಶ್ ಮತ್ತು ವಿಜಯಲಕ್ಷ್ಮಿ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಜಯಲಕ್ಷ್ಮಿ ಡೆತ್ ನೋಟ್ ಬರೆದಿಟ್ಟಿದ್ದಾರೆ. ಡೆತ್ ನೋಟಿನಲ್ಲಿ ನನ್ನ ಸಾವಿಗೆ ಮನೆಯವರು ಯಾರು ಕಾರಣರಲ್ಲ. ಇದಕ್ಕೆ ನನ್ನ ತವರು ಮನೆಯಾದ ಜೋಜನಾ ಗ್ರಾಮದ ರಾಜಪ್ಪಾ ಚಿದಕೆ ಕಾರಣನಾಗಿದ್ದಾನೆ. ಯಾಕೆಂದರೆ ನನ್ನ ಪತಿಯ ವಿರುದ್ಧ ಇಲ್ಲ-ಸಲ್ಲದ ಆರೋಪಗಳನ್ನು ಮಾಡಿ ತಲೆ ಕೆಡಿಸಿ ನನ್ನ ಸಂಸಾರವನ್ನು ಹಾಳು ಮಾಡುತ್ತಿದ್ದಾನೆ. ಇತನಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಡೆತ್ ನೋಟ್‍ನಲ್ಲಿ ಬರೆದಿದ್ದಾಳೆ.
ವ್ಯಕ್ತಿ ಆರೋಪ ಹಿನ್ನೆಲೆಯಲ್ಲಿ ದಂಪತಿ ಮಧ್ಯೆ ಮೂರು ದಿನಗಳಿಂದ ಜಗಳ ನಡೆಯುತ್ತಿದೆ. ಆದರೆ ಶುಕ್ರವಾರ ರಾತ್ರಿ ಮನನೊಂದು ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಚಿಂತಾಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಪಿಐ ಶ್ರೀ ಟಿ.ಆರ್ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.